Advertisement

ಹಾಲಿ- ಮಾಜಿ ಸಿಎಂ ಗಳು ಪುಡಿ ರೌಡಿಗಳಂತೆ ಮಾತನಾಡುತ್ತಿದ್ದಾರೆ: ಎಚ್.ವಿಶ್ವನಾಥ ಅಸಮಾಧಾನ 

11:33 AM Jan 31, 2023 | Team Udayavani |

ಹುಬ್ಬಳ್ಳಿ: ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಗಲ್ಲಿಯ ಪುಡಿ ರೌಡಿಗಳಂತೆ ಮಾತನಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಧಮ್ ಇದ್ದರೆ, ತಾಕತ್ತಿದ್ದರೆ ಎನ್ನುವ ಮಾತುಗಳಿಂದಾಗಿ ರಾಜಕಾರಣಿಗಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಿದ್ದಾಗ ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಇವರ ಮಾತುಗಳು ಯುವಕರಿಗೆ, ಮತದಾರರಿಗೆ, ರಾಜಕಾರಣ, ಆಡಳಿತಕ್ಕೆ ಆದರ್ಶವೇ” ಎಂದು ಕಿಡಿಕಾರಿದರು.

ಪಕ್ಷಕ್ಕಿಂತ ನಾಯಕ ಪ್ರಬಲ: ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಎಷ್ಟು ಹಣ ಇದೆ ಎಂದು ಕೇಳುತ್ತಾರೆ. ಈಗ ಪಕ್ಷಕ್ಕಿಂತ ಅದರ ನಾಯಕರು ಪ್ರಬಲರಾಗಿದ್ದಾರೆ. ಮುಂದೆ ನಡೆಯುವುದು ರಿಯಲ್ ಎಸ್ಟೇಟ್ ಉದ್ಯಮಿಗಳ ಚುನಾವಣೆ. ಅವರು ಟಿಕೆಟ್ ಗಾಗಿ 10 ಕೋಟಿ ರೂ. ನೀಡಲು ಸಹ ಸಿದ್ಧರಿದ್ದಾರೆ. ಇಂದು ದುಡ್ಡು ಮತ್ತು ಜಾತಿಯ ರಾಜಕಾರಣವೇ ವಿಜೃಂಭಿಸುತ್ತಿದೆ. ಹಿಂದಿನ ಹೋರಾಟ ಮತ್ತು ಚಳವಳಿಗಳನ್ನು ಸ್ವಾಮೀಜಿಗಳ ಕೈಗಳಿಗೆ ಕೊಟ್ಟಿದ್ದೇವೆ. ಮೀಸಲಾತಿ ಕುರಿತು ಸಹ ಅವರೇ ಹೋರಾಟ ಮಾಡುತ್ತಿದ್ದಾರೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.

ಆರೋಪ ಬಂದಾಗ ವಿಚಾರಣೆ ಮಾಡಿಸಲಿ: ಆಡಳಿತ ಪಕ್ಷದ ಮೇಲೆ ವಿಪಕ್ಷದವರು ಭ್ರಷ್ಟಾಚಾರದ ಬಗ್ಗೆ ಗುರುತರ ಆರೋಪ ಮಾಡಿದಾಗ ಅದನ್ನು ನ್ಯಾಯಯುತವಾಗಿ, ಗೌರವಯುತವಾಗಿ ವಿಚಾರಣೆ ನಡೆಸಬೇಕು. ಹಿಂದಿನಿಂದಲೂ ಹಾಗೆಯೇ ನಡೆದುಕೊಂಡು ಬಂದಿದೆ. ಆದರೆ, ಬಿಜೆಪಿ 40 ಪರ್ಸೆಂಟ್ ಆರೋಪ ಕುರಿತು ತೆಗೆದುಕೊಂಡ ನಿಲುವು ಖಂಡನಾರ್ಹ. ನೀವು ಮಾಡಿದ್ದೀರಿ, ನಾವು ಮಾಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳುತ್ತಿದೆ. ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವ ಬದಲು ನ್ಯಾಯಯುತವಾಗಿ ಸಮಸ್ಯೆ ಪರಿಹರಿಸಿ ಕೊಳ್ಳಬೇಕು ಎಂದರು.

ಇದನ್ನೂ ಓದಿ:ಕಿರಿಕ್‌ ಪಾರ್ಟಿ-2 ಯಾವಾಗ?: ಅಭಿಮಾನಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ರಕ್ಷಿತ್‌

Advertisement

ಯಾರನ್ನು ಯಾರು ಮುಗಿಸಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸುವವರೆಗೂ ನಾನು ರಾಜಕೀಯದಿಂದ ನಿವೃತ್ತಿಯಾಗಲಾರೆ ಎಂದು ಬಿಜೆಪಿ ಶಾಸಕ ರಮೇಶ ರಾಜಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಡಿ. ಬಿಡುಗಡೆ ಮಾಡಿ ಆರೋಪಿಸುವುದು ರಾಜಕಾರಣವೇ? ಸಿ.ಡಿ. ಮೂಲಕ ಯಾರನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಹಾಗೆ ಹೇಳಲೂಬಾರದು. ಮೇಲಕ್ಕೆ ಎತ್ತುವವರು, ಕೆಳಕ್ಕೆ ತುಳಿಯುವವರು ಮತದಾರರು. ಅವರೇ ಏನಾದರೂ ಮಾಡಬಹುದು ಹೊರತು, ರಾಜಕಾರಣಿಗಳಿಂದ ಏನೂ ಮಾಡಲು ಸಾಧ್ಯವಿಲ್ಲ. ಈ ರೀತಿ ಮಾತನಾಡುವುದು ಜಾರಕಿಹೊಳಿ ಕುಟುಂಬಕ್ಕೆ ಶೋಭೆ ತರುವುದಿಲ್ಲ. ಒಟ್ಟಾರೆ ರಾಜಕಾರಣ ಸಂಪೂರ್ಣ ಹೊಲಸೆದ್ದು ಹೋಗಿದೆ ಎಂದರು.

ಬಿಜೆಪಿ ಎಡವಟ್ಟು ಗಿರಾಕಿ: ಏನೋ ಒಂದು ಬದಲಾವಣೆಯಾಗಬಹುದು ಎಂದು ಬಿಜೆಪಿ ಸೇರ್ಪಡೆಯಾಗಿದ್ದೆ. ಇವರಂಥ ಎಡವಟ್ಟು ಗಿರಾಕಿಗಳು ಯಾರೂ ಇಲ್ಲ. ಶಾಲೆಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಸರಿಯಾಗಿ ಪರೀಕ್ಷೆ ನಡಸುತ್ತಿಲ್ಲ. ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಎಲ್ಲ ಹುದ್ದೆಗಳ ಭರ್ತಿಗೆ ದುಡ್ಡು ಕೇಳುತ್ತಿದ್ದಾರೆ. ಇದನ್ನು ಸರ್ಕಾರ ಎನ್ನಲಾಗುತ್ತದೆಯೇ? ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವದ ಆತ್ಮವೇ ಚುನಾವಣೆ. ಆದರೆ, ಎಲ್ಲ ಪಕ್ಷದ ಮುಖಂಡರು ಮ್ಯಾಜಿಕ್ ನಂಬರ್ ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಮ್ಯಾಜಿಕ್ ನಂಬರ್ ನಿರ್ಣಯಿಸುವವರು ಮತದಾರರು. ಆದರೆ, ಬಿಜೆಪಿಗೆ ಯಾರು ಮತ ನೀಡುವುದಿಲ್ಲವೋ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವ ಕೆಲಸ ಮಾಡುತ್ತಿದೆ. ಇಂತಹ ಅಯೋಗ್ಯತನ ನನ್ನ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಮತದಾರರ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಜನತಂತ್ರ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನವಿದು ಎಂದು ಆಕ್ರೋಶ ವ್ಯಕ್ಯಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಾರೆ. ನಾನು ಆರ್ಥಿಕವಾಗಿ ಸ್ಥಿತಿವಂತನಲ್ಲ. ಸೇವಾ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ. ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಅದು ಅವರ ವೈಯಕ್ತಿಕ ವಿಚಾರ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next