ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿನ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಾರಿ ಮಾಡಲಾದ ಕಠಿಣ ಕರ್ಫ್ಯೂ ಮಧ್ಯೆಯೂ ಜನರ ಸಂಚಾರ ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕರ್ಫ್ಯೂ ಉಲ್ಲಂಘಿಸಿ ರಸ್ತೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಗರದಲ್ಲಿ ಗುರುವಾರ ಆರು ಕಾರು ಮತ್ತು 36 ಬೈಕ್ ಸೇರಿ 42 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ತಡೆಯಲೇಬೇಕೆಂದು ಬಿಗಿಯಾದ ಕರ್ಫ್ಯೂ ಅನುಷ್ಠಾನ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೂ ಸಮಯ ನಿಗದಿ ಮಾಡಲಾಗಿದೆ. ಸಾರಿಗೆ ಬಸ್ ಸಂಚಾರವನ್ನು ರದ್ದು ಮಾಡಲಾಗಿದೆ. ಆದರೂ, ಅನೇಕ ನೆಪ ಮಾಡಿಕೊಂಡು ಹೊರಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಕಾರು, ಬೈಕ್‌ಗಳಲ್ಲಿ ಸಂಚರಿಸುವರು ವಿಪರೀತವಾಗಿದ್ದಾರೆ.
ಅನಗತ್ಯವಾಗಿ ಓಡಾಟ ಮತ್ತು ಸಂಚಾರ ನಿಯಂತ್ರಿಸಬೇಕೆಂಬ ನಿಟ್ಟಿನಲ್ಲಿ ಗುರುವಾರ ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಖುದ್ದು ರಸ್ತೆಗಳಿದಿದ್ದರು. ಅವರೊಂದಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಪ್ರಮಖ ವೃತ್ತ, ಪ್ರದೇಶಗಳಲ್ಲಿ ನಿಂತು ಕಾರು, ಬೈಕ್‌ಗಳನ್ನು ತಡೆದು ವಿಚಾರಿಸಿದರು. ಸೂಕ್ತ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು. ಅಲ್ಲದೇ, ಕೆಲವರಿಗೆ ಲಾಠಿ ರುಚಿ ತೋರಿಸಿದರು. ಇನ್ನು ಕೆಲವರಿಗೆ ರಸ್ತೆ ಮಧ್ಯದಲ್ಲೇ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದರು. ಈ ನಡುವೆ ಬೆಳಗ್ಗೆ 6ರಿಂದ 10ಗಂಟೆ ವರೆಗೆ ಅಗತ್ಯ ವಸ್ತುಗಳ ಮಾರಾಟ ಇದ್ದರೂ, ಕೆಲವೆಡೆ 10ಗಂಟೆ ನಂತರವೂ ಅಂಗಡಿಗಳು ತೆರೆದಿದ್ದವು.
ಹೀಗಾಗಿ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಅಂಗಡಿಯವರಿಗೆ ಎಚ್ಚರಿಕೆ ಕೊಟ್ಟು ಮುಚ್ಚಿಸಬೇಕಾದ ಪರಿಸ್ಥಿತಿ ಬಂತು. ಜತೆಗೆ ಆಳಂದ ನಾಕಾ ಮತ್ತು ಡಬರಾಬಾದ್ ಕ್ರಾಸ್ ಸಮೀಪ ವಾಗ್ವಾದವೂ ನಡೆಯಿತು.