ಶಿವಮೊಗ್ಗ: ಇಲ್ಲಿನ ಬಜರಂಗದಳ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಯ ಬಳಿಕ ಶಿವಮೊಗ್ಗ ನಗರದಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ಮುಂದುವರಿದಿದೆ. ಗುರುವಾರ ರಾತ್ರಿಯವರೆಗೂ ಹಲೆಡೆ ಕಲ್ಲು ತೂರಾಟ ನಡೆಸಿದ ಘಟನೆಗಳು ನಡೆದಿದ್ದವು.
ಗುರುವಾರ ಬೆಳಗ್ಗೆ ಲಷ್ಕರ್ ಮೊಹಲ್ಲಾದಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಬಜರಂಗದಳ ಕಾರ್ಯಕರ್ತ ನಾಗೇಶ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗೇಶ್ ಗೋವುಗಳ ಸಂರಕ್ಷಣೆ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು ಎನ್ನಲಾಗಿದೆ.
ಶಿವಮೊಗ್ಗ ನಗರದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಸಂಜೆ 6 ರಿಂದ ಶನಿವಾರ ಬೆಳಗ್ಗೆ 10 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಲ್ಲು ತೂರಾಟದಲ್ಲಿ 5 ವಾಹನಗಳು ಜಖಂಗೊಂಡಿದೆ. ಗುರುವಾರ ರಾತ್ರಿಯವರೆಗೂ ಗಾಂಧಿ ಬಜಾರ್, ರವಿವರ್ಮ ಬೀದಿಯ ಅಲ್ಲಲ್ಲಿ ಕಲ್ಲು ತೂರಾಟ ನಡೆದಿದ್ದವು.
ಇದನ್ನೂ ಓದಿ:ನಾಳೆ ರಾಜ್ಯ ಬಂದ್‌ಗೆ ಕರೆ : ರಾಜ್ಯಾದ್ಯಂತ ಪೊಲೀಸ್ ಬಂದೋಬಸ್ತ್
ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಹಾಲಿನ ಅಂಗಡಿ ಮತ್ತು ಮೆಡಿಕಲ್ ಶಾಪ್ ಗಳು ಮಾತ್ರ ತೆರೆದಿವೆ. ಶಿವಮೊಗ್ಗ ನಗರಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.