ಅಥಣಿ: ರಾಜ್ಯದಲ್ಲಿ ಒಮಿಕ್ರಾನ್ ಮತ್ತು ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆದರೂ ಕೂಡ ಬಹುತೇಕ ಕಡೆ ಕರ್ಫ್ಯೂ ಅಷ್ಟಕ್ಕಷ್ಟೇಯಾಗಿರುವುದು ಕಂಡು ಬಂತು.
ಬೆಳ್ಳಂ ಬೆಳಗ್ಗೆ ಜನರ ಓಡಾಟ ತಡೆಯಲು ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಿಗೆ ಬ್ಯಾರಿಕೇಡ್ ಹಾಕಿ ವಾಹನ ತಡೆದು ತಪಾಸಣೆ ನಡೆಸಿದರು. ಮಾಸ್ಕ್ ಧರಿಸದವರಿಗೆ ವಾರ್ನಿಂಗ್ ಮಾಡಿ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ಸೂಚಿಸಿರುವುದು ಕಂಡು ಬಂತು.
ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣ ಬಹುತೇಕ ಸ್ತಬ್ಧವಾಗಿತ್ತು. ಸದಾ ಜನರು-ವಾಹನಗಳಿಂದ ಗಿಜಿಗುಡುತ್ತಿದ್ದ ಅಂಬೇಡ್ಕರ್ ವೃತ್ತ, ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿಯಾಗಿದ್ದವು. ಬಸ್ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ತೀರ ಕಡಿಮೆಯಾಗಿತ್ತು. ಕರ್ಫ್ಯೂ ಮಧ್ಯೆ ಕೆಲಸವಿಲ್ಲದೇ ಓಡಾಡುತ್ತಿದ್ದ ಹಲವರು ಪೊಲೀಸರ ಕೈಗೆ ಸಿಕ್ಕಿಬಿದ್ದು ದಂಡ ತೆರಬೇಕಾಯಿತು.
ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಎಲ್ಲೆಡೆ ಪೊಲೀಸ ಕಟ್ಟೆಚ್ಚರ ವಹಿಸಿದ್ದರು. ಎರಡನೇ ಶನಿವಾರವಾಗಿದ್ದರಿಂದ ಸಹಜವಾಗಿ ಸರ್ಕಾರಿ ಕಚೇರಿ, ಬ್ಯಾಂಕ್‌ಗೆ ರಜೆ ಇತ್ತು. ಶಾಲಾ-ಕಾಲೇಜಿಗೆ ರಜೆ ನೀಡಲಾಗಿತ್ತು. ಯಾರೊಬ್ಬರೂ ಅನಗತ್ಯವಾಗಿ ಹೊರಗಡೆ ಬರದಂತೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ತಿಳಿ ಹೇಳಿದರೂ ಕೆಲವರ ಓಡಾಟ ಕಂಡು ಬಂತು.
ಹೋಟೆಲ್ ಮಾಲೀಕರು ಆದೇಶ ಮೀರಿ ಗ್ರಾಹರನ್ನು ಕೂಡಿಸಿ ತಿಂಡಿ-ತಿನಿಸು ನೀಡುತ್ತಿರುವುದು ಸಾಮಾನ್ಯವಾಗಿತ್ತು. ಮೊದಲ ದಿನದ ಕರ್ಫ್ಯೂ ಅಷ್ಟಕ್ಕಷೇr ಆದಂತಾಗಿತ್ತು. ಅಥಣಿ ತಾಲೂಕಿನ ಕರ್ನಾಟಕ ಗಡಿ ಭಾಗದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಾಲೂಕು ದಂಡಾ ಧಿಕಾರಿ ದುಂಡಪ್ಪ ಕೋಮಾರ್, ಡಿವೈಎಸ್ಪಿ ಗಿರೀಶ, ಸಿಪಿಐ ಶಂಕರಗೌಡ ಪಾಟೀಲ, ತಾಪಂ ಇಒ ಶೇಖರ ಕರಬಸಪ್ಪಗೋಳ, ಪಿಎಸೈ ಕುಮಾರ ಹಾರ್ಡಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು