ಕಮಲನಗರ: ಪರಿವರ್ತನಾಶೀಲ ಸಮಾಜದಲ್ಲಿ ನಾವು ಜೀವಿಸುತ್ತಿದ್ದರೂ ಸಹ ಜೀವನದ ವಿಕಾಸಕ್ಕೆ ಅಗತ್ಯವಿರುವ ಆದರ್ಶಗಳನ್ನು ಮರೆಯಬಾರದು. ಧರ್ಮ ಪರಿಪಾಲನೆಯಿಂದ ಮಾತ್ರ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಹಾವಗಿಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರು ಹೇಳಿದರು.
ಡೋಣಗಾಂವ (ಎಂ) ಗ್ರಾಮದ ಬಳಿ ಮಹಾಳಪ್ಪಯ್ನಾ ಜಾತ್ರೆ ನಿಮಿತ್ತ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಆಧುನಿಕತೆ ಮತ್ತು ಸುಧಾರಣೆ ಹೆಸರಿನಲ್ಲಿ ಧರ್ಮದ ಮೂಲ ಸಂಸ್ಕೃತಿ ಮತ್ತು ಆಚರಣೆಗಳನ್ನು ಮರೆಯುತ್ತಿರುವುದೇ ಇಂದಿನ ದುಃಖ-ದುಮ್ಮಾನಗಳಿಗೆ ಕಾರಣ ಎಂದರು.
ಮಹಾರಾಷ್ಟ್ರದ ಹಣೇಗಾಂವ ಶ್ರೀ ಶಂಕರಲಿಂಗ ಶಿವಾಚಾರ್ಯರು ಮಾತನಾಡಿ, ಜನರ ಹಿತ ಬಯಸುವವನೇ ನಿಜವಾದ ಪುರೋಹಿತ. ಹಣದ ಆಮಿಷಕ್ಕೆ ಬಲಿಯಾಗದೇ ಸತ್ಯಪೂರ್ಣ ಧಾರ್ಮಿಕ ಸಂಸ್ಕೃತಿ ಉತ್ಕೃಷ್ಠಗೊಳ್ಳಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಶ್ರೀ ಹಾವಗೀಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಆದರ್ಶ ಮೌಲ್ಯಗಳ ಸಂರಕ್ಷಣೆಗಾಗಿ ಶ್ರಮವಹಿಸಿ ಕಾರ್ಯ ಮಾಡಬೇಕಾಗಿದೆ. ದುಂದು ವೆಚ್ಚಕ್ಕೆ ಅವಕಾಶ ಕೊಡದೇ ಸರಳ ರೀತಿಯಲ್ಲಿ ಧರ್ಮ ಕಾರ್ಯ ನಡೆಸಲು ಭಕ್ತ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದರು.
ಶಾಸಕ ಪ್ರಭು ಚವ್ಹಾಣ ಅವರು ಸುಕ್ಷೇತ್ರ ಮಹಾಳಪ್ಪಯ್ನಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅಡ್ಡಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವದಲ್ಲಿ ಕವಳಾಸ ಮಠದ ಶ್ರೀ ಬಸವಲಿಂಗ ಶಿವಾಚಾರ್ಯ, ರಾಜೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ಗ್ರಾಮದ ಪ್ರಮುಖ ಗಣ್ಯರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದರು. ತಾಲೂಕಿನ ಬಹುತೇಕ ಗ್ರಾಮಗಳು ಹಾಗೂ ಮಹಾರಾಷ್ಟ್ರ, ಆಂಧ್ರದ ಭಕ್ತಾದಿಗಳು ದೇವರ ದರ್ಶನ ಪಡೆದರು.