Advertisement

ಬದುಕಿಗೆ ಸಾಂಸ್ಕೃತಿಕ ನೆಲೆಗಟ್ಟು ಮುಖ್ಯ

03:23 PM May 21, 2018 | |

ಚಿತ್ರದುರ್ಗ: ಮನುಷ್ಯನ ಬದುಕು ನೈಸರ್ಗಿಕ ಸಸ್ಯಗಳು ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ನಿಂತಿದೆ ಎಂದು ಬೆಂಗಳೂರಿನ ಅಂತರ್‌ ವಿಷಯ ವಿಜ್ಞಾನಗಳ ವಿಶ್ವವಿದ್ಯಾಲಯದ ಫುಲ್‌ ಬ್ರೈಟ್‌ ಫೆಲೋ ಮತ್ತು ಸಹ ಪ್ರಾಧ್ಯಾಪಕ ಬಿ.ಎಸ್‌. ಸೋಮಶೇಖರ ಹೇಳಿದರು.

Advertisement

ಇಲ್ಲಿನ ಐಎಂಎ ಸಭಾಂಗಣದಲ್ಲಿ ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಇವುಗಳ ಸಹಯೋಗದೊಂದಿಗೆ ಭಾನುವಾರ “ಕರ್ನಾಟಕದ ಸಾಂಸ್ಕೃತಿಕ ಮಹತ್ವದ ಸಸ್ಯಗಳು ಅಧ್ಯಯನಾತ್ಮಕ ನೋಟಗಳು’ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ನೈಸರ್ಗಿಕ ಸಂಪನ್ಮೂಲಗಳ ನೆಲೆಗಟ್ಟಿನ ಸಸ್ಯಗಳನ್ನು ಬಳಸಿಕೊಂಡು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಬಹಳ ಮುಖ್ಯ. ಅರಳಿ ಮರ, ಬೇವಿನ ಮರಕ್ಕೆ ಎಲ್ಲರೂ ಪೂಜೆ ಮಾಡುವುದು ವಾಡಿಕೆ. ಒಂದೊಂದು ಪ್ರದೇಶ, ಸಮುದಾಯದಲ್ಲಿ ಅವರದೇ ಆದ ವಿಶಿಷ್ಟತೆ ಇದೆ. ಬಾಳೆ ಎಳೆ, ಮುತ್ತುಗದ ಎಲೆ ಮೇಲೆ ಊಟ ಮಾಡುವುದನ್ನು ನೋಡಿದ್ದೇವೆ. ತಾವರೆ ಎಲೆ ಮೇಲೆ ಒಂದು ಸಮುದಾಯದವರು ಊಟ ಮಾಡುವ ಸಂಪ್ರದಾಯವಿದೆ. ಹಾಗಾಗಿ ಗಿಡ, ಮರ ಹೀಗೆ ಕರ್ನಾಟಕದ ಸಾಂಸ್ಕೃತಿಕ ಮಹತ್ವದ ಸಸ್ಯಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯತೆ ಇದೆ ಎಂದರು.

ಮಾವಿನ ಎಲೆ ತೋರಣವನ್ನು ಬಾಗಿಲಿಗೆ ಕಟ್ಟಿ ಬೇವಿನ ಸೊಪ್ಪು ಸಿಗಿಸಿದರೆ ಮಾತ್ರ ಯುಗಾದಿ ಹಬ್ಬದ ಆಚರಣೆಯಾಯಿತು ಎನ್ನುವ ನಂಬಿಕೆ ಜನರಲ್ಲಿ ಈಗಲೂ ಇದೆ. ಅಶೋಕ ಮರದ ಎಲೆ ಮತ್ತು ಹೂವುಗಳನ್ನು ಬಾಗಿಲಿಗೆ ತೋರಣವಾಗಿ ಕಟ್ಟುವ ಪದ್ಧತಿ ಮಲೆನಾಡಿನಲ್ಲಿದೆ. ಹಿರಿಯರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಒಪ್ಪಿಕೊಂಡಿರುವುದ ರಿಂದ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ತಿಳಿಸಿದರು.

ಅರಳಿ ಮರಕ್ಕೆ ಮಾತ್ರ ಏಕೆ ಕಟ್ಟೆ ಕಟ್ಟುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ.ನಿಜವಾಗಿಯೂ ಅರಳಿ ಮರ ನಮ್ಮ ಭಾಗದ್ದಲ್ಲ. ಈಶಾನ್ಯ ಭಾರತದಿಂದ ಬಂದಿದ್ದಾಗಿದೆ. ಬಿಳಿ ಮತ್ತಿ ಮರ ಹೊಳೆ ಸಾಲಿನಲ್ಲಿ ಕಂಡು ಬರುವುದು ಹೆಚ್ಚು. ಮಂಡ್ಯ ಭಾಗದಲ್ಲಿ ಬಿಳಿ ಮತ್ತಿಗೆ ಪೂಜೆ ಸಲ್ಲಿಸಿ ಇಡೀ ಊರಿನವರು ಅಲ್ಲಿ ಅಡುಗೆ ಮಾಡಿ ನೆಲವನ್ನು ಸ್ವತ್ಛಗೊಳಿಸಿ ಮಣ್ಣಿನ ಮೇಲೆಯೇ ಊಟ ಮಾಡುವ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದರಿಂದ ಇಸುಬು, ಕಜ್ಜಿ, ತುರಿಕೆ ವಾಸಿಯಾಗುತ್ತದೆಂಬ ನಂಬಿಕೆ ಆ ಭಾಗದಲ್ಲಿ ಜೀವಂತವಾಗಿದೆ ಎಂದು ವಿವರಿಸಿದರು.

Advertisement

ಸಂಪತ್ತಿನ ಸೆಲೆಯಾಗಿರುವ ಸಾಂಸ್ಕೃತಿಕ ಸಸ್ಯಗಳನ್ನು ಹೇಗೆ ಬಳಕೆ ಮಾಡಿ ಉಳಿಸಿಕೊಳ್ಳಬೇಕು ಎಂಬ ಕೌಶಲ್ಯವಿರಬೇಕು. ಚಳ್ಳಕೆರೆಯಲ್ಲಿ ಡಿಆರ್‌ಡಿಒ ಅಲ್ಲಿನ ಸಾವಿರಾರು ಎಕರೆ ಹುಲ್ಲುಗಾವಲು ಗಿಡ, ಮರ, ಸಸ್ಯಗಳನ್ನು ನಿರ್ಲಕ್ಷಿಸಿರುವುದು ಇಡೀ ಪ್ರಾಣಿ ಹಾಗೂ ಪಕ್ಷಿ ಸಂಕುಲ ಮಾನವನ ಜೀವನಕ್ಕೆ ಮಾರಕವಾಗುತ್ತದೆ ಎಂದು ಎಚ್ಚರಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ| ಎನ್‌.ಎಸ್‌. ಮಹಂತೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನ ಸಾಧನೆ, ಸಂಶೋಧನೆ ಹಿಂದೆ ಭೌಗೋಳಿಕ ಪಾತ್ರ ಯಾವ ರೀತಿ ವಹಿಸುತ್ತದೆ ಎನ್ನುವುದು ಮುಖ್ಯ. ಅತ್ಯಂತ ಕ್ರಿಯಾಶೀಲ ಪರಿಸರ ವಿಜ್ಞಾನಿಯಾಗಿರುವ ಬಿ.ಎಸ್‌. ಸೋಮಶೇಖರ ಐವತ್ತಕ್ಕೂ ಹೆಚ್ಚು ಸಂಶೋಧನಾ ಬರಹಗಳನ್ನು ಪ್ರಕಟಿಸಿದ್ದಾರೆ. ಅತ್ಯುತ್ತಮ ವಿಜ್ಞಾನ ಲೇಖಕ ಒಳಗೊಂಡಂತೆ ಅನೇಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
 
ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ| ಲಕ್ಷ್ಮಣ ತೆಲಗಾವಿ, ಶ್ರೀಶೈಲ ಆರಾಧ್ಯ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ. ನಾಗರಾಜ್‌, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಡಿ. ಗೋಪಾಲಸ್ವಾಮಿ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಸಿ. ನಿರಂಜನಮೂರ್ತಿ, ಎಲ್‌.ಎಂ. ತಿಪ್ಪೇಸ್ವಾಮಿ, ನಿರಂಜನ ದೇವರಮನೆ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next