ಹುಬ್ಬಳ್ಳಿ: ಇಸ್ಕಾನ್ ಮಂದಿರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 3ರಂದು ಇಲ್ಲಿನ ರಾಯಾಪುರದ ಇಸ್ಕಾನ್ ಮಂದಿರದಲ್ಲಿ ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನ ದಾಸ, ಮಕ್ಕಳಲ್ಲಿ ಸಾಂಸ್ಕೃತಿಕ, ಪರಂಪರೆ ಮೌಲ್ಯಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇಸ್ಕಾನ್ 2003ರಿಂದ ಇಂತಹ ಉತ್ಸವ ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿಯೂ ಉತ್ಸವ ಕೈಗೊಳ್ಳಲಾಗುತ್ತಿದೆ. ಜು.3ರಂದು ಬೆಳಿಗ್ಗೆ 10:30ಗಂಟೆಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಉತ್ಸವದಲ್ಲಿ ಸಾಂಸ್ಕೃತಿಕ, ಪರಂಪರೆ ಮೌಲ್ಯಗಳನ್ನು ಹೆಚ್ಚಿಸುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳಿಗೆ ವಿವಿಧ ಸುಮಾರು 30 ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಸರಕಾರಿ, ಖಾಸಗಿ ಶಾಲೆಗಳು ಸೇರಿ ಇದುವರೆಗೆ 1,200ಕ್ಕೂ ಅಧಿಕ ಮಕ್ಕಳು ನೋಂದಣಿ ಮಾಡಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ನೋಂದಣಿ ಮಾಡಿಸುವ ಸಾಧ್ಯತೆ ಇದೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಸುಮಾರು 800ಕ್ಕೂ ಹೆಚ್ಚು ಮಕ್ಕಳಿಗೆ ಪ್ರಶಸ್ತಿ ನೀಡಲಾಗುವುದು. ಪಾಲ್ಗೊಂಡ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ ದೊರೆಯಲಿದೆ ಎಂದರು.
ಉತ್ಸವದಲ್ಲಿ ಶಿಕ್ಷಕರನ್ನು ಗೌರವಿಸಲಾಗುವುದಲ್ಲದೆ, ಟಾಪ್ ಐದು ಶಾಲೆಗಳಿಗೆ ಪಾರಿತೋಷಕ ನೀಡಿ ಪುರಸ್ಕರಿಸಲಾಗುವುದು ಎಂದರು.
ಯುವಕರಲ್ಲಿ ಉತ್ತಮ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇಸ್ಕಾನ್ ಫ್ಲೈಟ್ ಯೋಜನೆ ಆರಂಭಿಸಿದ್ದು, 15 ದಿನಗಳ ಕಾರ್ಯಕ್ರಮವಾಗಿದೆ. ಇದರಲ್ಲಿ ಪಾಲ್ಗೊಳ್ಳಲುವ ವಿದ್ಯಾರ್ಥಿಗಳು ಅಕ್ಷಯ ಪಾತ್ರೆಯಲ್ಲಿ ತೊಡಗಿ ಅಲ್ಲಿನ ಹಲವು ಸಮಸ್ಯೆಗಳಿಗೆ ಸುಲಭ ರೀತಿಯ ಪರಿಹಾರ ರೂಪನೆಯ ಚಿಂತನೆಯಲ್ಲಿ ತೊಡಗಲಿದ್ದಾರೆ. ಪ್ರಸ್ತುತ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಇದನ್ನು ಕೈಗೊಳ್ಳಲಾಗುತ್ತಿದ್ದು, ಎಸ್‌ಡಿಎಂ, ಬಿವಿಬಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದರು.
ಈ ಬಾರಿ ಸಾತ್ವಿಕ ಆಹಾರ ನೈಪುಣ್ಯತೆ ತರಬೇತಿ ಆಯೋಜಿಸಲಾಗುತ್ತಿದ್ದು, ಜು.13ರಂದು ಅಕ್ಷಯಪಾತ್ರೆ ಅಡುಗೆ ಆವರಣದಲ್ಲಿ ಈ ಕುರಿತು ಆರ್.ಕೆ.ಅನುಶ್ರುತಿ ತರಬೇತಿ ನೀಡಲಿದ್ದಾರೆ. ಸಾತ್ವಿಕ ಆಹಾರ ನಿಟ್ಟಿನಲ್ಲಿ ವಿಷಮುಕ್ತ ಪದಾರ್ಥಗಳ ಬಳಕೆ ಬಗ್ಗೆಯೂ ತಿಳಿವಳಿಕೆ ನೀಡಲಾಗುತ್ತಿದೆ. ಇಸ್ಕಾನ್ ಮೈಸೂರು ಕೇಂದ್ರದಲ್ಲಿ 40 ಎಕರೆ ಜಮೀನಿನಲ್ಲಿ ಹಾಗೂ ಹು.ಧಾ.ದಲ್ಲಿ 1 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಕೈಗೊಳ್ಳಲಾಗುತ್ತಿದೆ ಎಂದರು.
ಇಸ್ಕಾನ್ ಸಾಂಸ್ಕೃತಿಕ ಉತ್ಸವದ ಶೀರ್ಷಿಕೆ ಪ್ರಾಯೋಜಕರಾದ ಡಾ| ವಿ.ಎಸ್.ವಿ.ಪ್ರಸಾದ, ಅಧಿಕೃತ ಪ್ರಾಯೋಜಕರಾದ ನರೇಂದ್ರ ಬರವಾಲ್, ಹು.ಧಾ.ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ ಇದ್ದರು.