Advertisement

Hosanagara: ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಅತಿ ಮುಖ್ಯ – ಆರಗ ಜ್ಞಾನೇಂದ್ರ

08:27 PM Jan 28, 2024 | Pranav MS |

ಹೊಸನಗರ: ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳು ವಕೀಲರು, ಡಾಕ್ಟರ್ ,ಐಎಎಸ್, ಐಪಿಎಸ್ ಅಧಿಕಾರಿಗಳು ಆಗದಿದ್ದರೂ ತೊಂದರೆ ಇಲ್ಲ ಆದರೆ ಸಮಾಜಘಾತುಕರಾಗಿ ಬೆಳೆಯದೆ ಸಮಾಜವನ್ನು ಅಭಿವೃದ್ಧಿಯತ್ತ ನಡೆಸಿದರೆ ಅಂದಿಗೆ ಶಿಕ್ಷಣದ ಉದ್ದೇಶ ಸಾರ್ಥಕ. ಅಂತಹ ಸಂಸ್ಕಾರಯುತವಾದ ಶಿಕ್ಷಣವನ್ನು ಮತ್ತಿ ಕೈ ಶಾಲೆ ತನ್ನೆಲ್ಲಾ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ನುಡಿದರು.

Advertisement

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲೆಗಳು ನೀಡುವ ಶಿಕ್ಷಣ ಬದುಕಿನ ದಿಕ್ಕನ್ನೇ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಅವಕಾಶ ವಂಚಿತ ಮಕ್ಕಳ ಬದುಕಿನಲ್ಲಿ ಅವಕಾಶಗಳನ್ನ ನೀಡುವ ಸಾಮರ್ಥ್ಯ ಶಾಲೆಗಿದೆ ಎಂದರು.
ನಾವು ಶಾಲೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ನೀಡುತ್ತಾ ಬಂದಿದ್ದೇವೆ. ಆದರೆ ಪ್ರಸ್ತುತ ಸರ್ಕಾರ ಗ್ಯಾರಂಟಿ ಯೋಜನೆಗಳ ಹಿಂದೆ ಬಿದ್ದಿದ್ದು ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಯವರಲ್ಲಿ ಕೇಳಿದಾಗ ಉಚಿತ ಭಾಗ್ಯಗಳಿಂದ ಜನ ಆನಂದವಾಗಿದ್ದಾರೆ ಎಂದಿದ್ದಾರೆ. ನೀವು ಆನಂದವಾಗಿದ್ದರೆ ನಾನು ಆನಂದವಾಗಿರುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೋಕಸಭಾ ಸದಸ್ಯರಾದ ಬಿ. ವೈ ರಾಘವೇಂದ್ರ ಮಾತನಾಡಿ, ಜೀವನದ ಹಸಿವನ್ನು ನೀಗಿಸಲು ಸ್ವಾಭಿಮಾನದ ಬದುಕನ್ನು ರೂಪಿಸಲು ಶಿಕ್ಷಣ ಅತ್ಯಂತ ಮುಖ್ಯ ಅಂತಹ ಶಿಕ್ಷಣವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುವ ಶಕ್ತಿ ತುಂಬುವ ಕಾರ್ಯ ಮತ್ತಿಕೈ ಶಾಲೆಯಿಂದ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಮಕ್ಕಳಿಗೆ ತಾಯಿಯ ಪ್ರೀತಿಯನ್ನು ಶಿಕ್ಷಕರು ನೀಡಬಲ್ಲರು ಅಂತಹ ಶಿಕ್ಷಕರಿಗೆ ಬೆನ್ನೆಲುಬಾಗಿ ಪೋಷಕರು ನಿಂತಾಗ ಮಾತ್ರ ಮಕ್ಕಳ ಜೀವನ ಸುಂದರವಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಕೇಂದ್ರ ಸರ್ಕಾರದಿಂದ ಶತಮಾನ ಪೂರೈಸಿದ ಶಾಲೆಗಳಿಗೆ ನೀಡಲಾಗುವ ಪಿಎಂ ಶ್ರೀ ಅನುದಾನವನ್ನು ಮತ್ತಿಕೈ ಶಾಲೆಗೂ ಸಿಗುವ ಸಲುವಾಗಿ ಸಕಲ ಕೆಲಸವನ್ನು ಮಾಡಲು ನಾವು ಸಿದ್ದ ಎಂದು ನುಡಿದರು.

ಇದೇ ಸಮಯದಲ್ಲಿ ಮಾತನಾಡಿದ ಅವರು ಕೊಡಚಾದ್ರಿ ರೋಪ್ ವೇ, ರಸ್ತೆ ಸೇರಿದಂತೆ ಇಲ್ಲಿನ ಸುತ್ತಮುತ್ತಲಿನ ಕಾಮಗಾರಿಗಳನ್ನು ಮಾಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಸಕಲ ಕಾರ್ಯಗಳನ್ನು ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಮಾತನಾಡಿ ನಮ್ಮಲ್ಲಿ ಕ್ರೀಡಾಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಬಲ್ಲ ಸಾಮರ್ಥ್ಯವಿರುವ ಹಲವು ವಿದ್ಯಾರ್ಥಿಗಳಿದ್ದಾರೆ, ಅವರ ಪ್ರತಿಭೆಯ ಅನಾವರಣಕ್ಕಾಗಿ ಪ್ರತಿ ಶಾಲೆಯಲ್ಲಿಯೂ ದೈಹಿಕ ಶಿಕ್ಷಕರ ಅಗತ್ಯತೆ ಇದೆ ಎಂದರು.

ಪೋಷಕರು ಟಿವಿ ಸೀರಿಯಲ್ ಗಳನ್ನು ನೋಡುವುದನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳಿಗೆ ಅತ್ಯುತ್ತಮ ಗುಣವನ್ನು ಹೇಳಿಕೊಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಜೊತೆ ಪೋಷಕರು ಕೈಜೋಡಿಸಬೇಕು ಎಂದು ನುಡಿದರು.

ಇಂದಿನ ದಿನಗಳಲ್ಲಿ ಅತಿ ಹೆಚ್ಚಿನ ಅಪರಾಧಗಳು ಶಿಕ್ಷಣವಂತರಿಂದಲೇ ನಡೆಯುತ್ತಿರುವುದು ಬೇಸರದ ಸಂಗತಿ ಹಾಗಾಗಿ ದಯವಿಟ್ಟು ವಿದ್ಯಾರ್ಥಿಗಳು ತಾವು ಪಡೆದ ಶಿಕ್ಷಣವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಶಾಲೆಯ ಹಿರಿಯ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು, ದಾನಿಗಳು ಮತ್ತು ಶಾಲೆಯ ಇತರೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಿ.ಕೆ ಸತ್ಯನಾರಾಯಣ ಮಾನ್ಯ ಅಧ್ಯಕ್ಷರು, ಗ್ರಾಮ ಪಂಚಾಯತ್ ಸಂಪೆಕಟ್ಟೆ , ಹೆಚ್.ಆರ್ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾ.ಶಿ. ಸಾ ಇಲಾಖೆ, ಹೊಸನಗರ
ಮೋಹನ್ ಶೆಟ್ಟಿ, ವಕೀಲರು, ಡಿ.ಎಲ್ ಧರ್ಮೇಂದ್ರ ಭಟ್ ಪ್ರಧಾನ ಕಾರ್ಯದರ್ಶಿ ಶತಮಾನೋತ್ಸವ ಸಮಿತಿ, ಅಶ್ವಿನಿ ಸುಖೇಶ್ ಉಪಾಧ್ಯಕ್ಷರು, ಎಸ್ ಡಿ ಎಂ ಸಿ. ಒಳಗೊಂಡಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next