Advertisement

ಕರಾವಳಿಯ ಸಾಂಸ್ಕೃತಿಕ ರಂಗ ಸ್ತಬ್ಧ !

09:26 PM Apr 06, 2020 | Sriram |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರತಿದಿನ ರಾತ್ರಿ ಅಲ್ಲಲ್ಲಿ ಯಕ್ಷಗಾನ, ನಾಟಕ, ಸಂಗೀತ ಕಾರ್ಯಕ್ರಮಗಳು ಕಾಣ ಸಿಗುವುದು ವಿಶೇಷ. ಆದರೆ ಕೋವಿಡ್  19 ಎಂಬ ಮಹಾಮಾರಿಯಿಂದಾಗಿ ಇಂತಹ ಸಾಂಸ್ಕೃತಿಕ ಲೋಕವೇ ಕರಾವಳಿಯಲ್ಲಿ ಸಂಪೂರ್ಣ ಸ್ತಬ್ಧವಾಗಿದ್ದು, ಸಾವಿರಾರು ಕಲಾವಿದರು ಅತಂತ್ರರಾಗಿದ್ದಾರೆ.

Advertisement

ಕರಾವಳಿಯ ಗಂಡುಕಲೆ ಯಕ್ಷಗಾನ, ತುಳು ಹಾಗೂ ಕನ್ನಡ ರಂಗಭೂಮಿ, ತುಳು ಸಿನೆಮಾ ರಂಗ, ಭರತನಾಟ್ಯ, ಸಂಗೀತ ಸಹಿತ ಎಲ್ಲ ಪ್ರಕಾರದ ಸಾಂಸ್ಕೃತಿಕ ಲೋಕ ಸದ್ಯ ಮೌನವಾಗಿದೆ. ಇದರಿಂದಾಗಿ ಕಲೆಯನ್ನೇ ಉಸಿರಾಗಿ ನಂಬಿಕೊಂಡು ಬಂದ, ಅದರಿಂದಲೇ ಜೀವನ ನಡೆಸುತ್ತಿರುವ ಸಾವಿರಾರು ಕಲಾವಿದರು ಕಂಗಾಲಾಗಿದ್ದಾರೆ. ಮುಂದೇನು ಎಂಬ ಆತಂಕದಲ್ಲಿದ್ದಾರೆ.

ಕಾರ್ತಿಕ (2019ರ ನವೆಂಬರ್‌ 12)ದಿಂದ ಪತ್ತನಾಜೆ (2020ರ ಮೇ 23)ಯವರೆಗೆ ಸುಮಾರು 22 ಮುಖ್ಯ ಹಾಗೂ ಇತರ ಯಕ್ಷಗಾನ ಮೇಳಗಳು ಕರಾವಳಿ ಜಿಲ್ಲೆಯಾದ್ಯಂತ ತಿರುಗಾಟ ನಡೆಸಬೇಕಿತ್ತು. ಆದರೆ ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾಗುವ ಮುನ್ನವೇ ಕರಾವಳಿಯ ಯಕ್ಷಗಾನ ಪ್ರದರ್ಶನಕ್ಕೆ ಜಿಲ್ಲಾಡಳಿತದಿಂದ ತಡೆಬಂದಿತ್ತು. ಹೀಗಾಗಿ ಮಾರ್ಚ್‌ ಮಧ್ಯಭಾಗದಲ್ಲಿಯೇ ಯಕ್ಷಗಾನ ಪ್ರದರ್ಶನಗಳು ಒಂದೊಂದಾಗಿ ಸ್ಥಗಿತಗೊಂಡಿತ್ತು.

ಈ ಪೈಕಿ ಕೆಲವು ಮೇಳಗಳ ಕಲಾವಿದರಿಗೆ ಮೇಳದಿಂದ ಆರ್ಥಿಕ ನೆರವು ಒದಗಿಸಲಾಗಿದ್ದರೆ, ಉಳಿದ ಮೇಳದ ಕಲಾವಿದರು ಯಕ್ಷಗಾನವಿಲ್ಲದೆ ಮನೆ ನಿರ್ವಹಣೆ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿಗೆ ಬಂದಿದ್ದಾರೆ.

ಒಂದು ಯಕ್ಷಗಾನಕ್ಕೆ ಕನಿಷ್ಠ 1ರಿಂದ 3 ಲಕ್ಷ ರೂ. ಖರ್ಚು ಇರುತ್ತದೆ. ಅಂದರೆ ಈ ಮೂಲಕ ಹೂವು, ಬ್ಯಾಂಡ್‌, ವಾದ್ಯ, ಲೈಟಿಂಗ್‌, ಊಟೋಪಚಾರ, ಆಮಂತ್ರಣ ಪತ್ರಿಕೆ ಸಹಿತ ಬೇರೆ ಬೇರೆ ಕ್ಷೇತ್ರಗಳಿಗೆ ವ್ಯವಹಾರವಾಗುತ್ತದೆ. ಸದ್ಯ ಇದಾವುದಕ್ಕೂ ಅವಕಾಶವಿಲ್ಲ.

Advertisement

ಕೋಸ್ಟಲ್‌ವುಡ್‌ ಅತಂತ್ರ
ಕೋವಿಡ್  19 ಕಾರಣದಿಂದ ಕೋಸ್ಟಲ್‌ವುಡ್‌ ಕೂಡ ಸ್ತಬ್ದವಾಗಿದೆ. ಶೂಟಿಂಗ್‌ ನಡೆಯುತ್ತಿದ್ದ ಸಿನೆಮಾಗಳು ಅರ್ಧದಲ್ಲಿಯೇ ಬಾಕಿಯಾಗಿದ್ದರೆ, ಶೂಟಿಂಗ್‌ ಆಗಿರುವ ಸಿನೆಮಾಗಳ ತಯಾರಿ ಕೆಲಸವೂ ಬಾಕಿ ಆಗಿವೆ. ಈ ಮಧ್ಯೆ ಎಲ್ಲ ರೀತಿಯಿಂದ ಸಿದ್ಧಗೊಂಡಿರುವ ಸಿನೆಮಾಗಳು ಥಿಯೇಟರ್‌ ಬಂದ್‌ ಆಗಿರುವ ಕಾರಣದಿಂದ ರಿಲೀಸ್‌ಗಾಗಿ ದಿನ ಕಾಯುತ್ತಿದೆ. ಭೋಜರಾಜ್‌ ಎಂಬಿಬಿಎಸ್‌, ರಾಕೆಟ್‌, ಗಬ್ಬರ್‌ಸಿಂಗ್‌ ಸಿನೆಮಾಗಳ ಶೂಟಿಂಗ್‌ ಅರ್ಧದಲ್ಲಿ ಬಾಕಿಯಾಗಿದ್ದರೆ, ಇಂಗ್ಲೀಷ್‌, ಕಾರ್ನಿಕೊದ ಕಲ್ಲುರ್ಟಿ, ಪೆಪ್ಪೆರೆರೆಪೆರೆರೆ ಸಹಿತ ಹಲವು ಸಿನೆಮಾಗಳು ರಿಲೀಸ್‌ ದಿನಾಂಕವನ್ನೇ ಮುಂದೂಡಿ ದಿನಕಾಯುವ ಪರಿಸ್ಥಿತಿ ಎದುರಾಗಿದೆ. ಕೋಸ್ಟಲ್‌ವುಡ್‌ನ‌ಲ್ಲಿ ದುಡಿಯುತ್ತಿರುವ ಕಲಾವಿದರು, ತಂತ್ರಜ್ಞರು ಸಹಿತ ಬಹುತೇಕ ಜನರು ಈಗ ದುಡಿಮೆಯಿಲ್ಲದೆ ಅತಂತ್ರರಾಗಿದ್ದಾರೆ.

ನಾಟಕಗಳಿಗೆ ಅಂಕದ ಪರದೆ
ಎಪ್ರಿಲ್‌-ಮೇ ತಿಂಗಳಿನಲ್ಲಿ ಅತ್ಯಂತ ಹೆಚ್ಚು ನಾಟಕಗಳು ಪ್ರದರ್ಶನವಾಗುವ ಸಮಯ. ಆದರೆ ಈಗ ಎಲ್ಲ ನಾಟಕಗಳಿಗೆ ಅಂಕದ ಪರದೆ ಬಿದ್ದಿದೆ. ಅವಿಭಜಿತ ಜಿಲ್ಲೆಗಳಲ್ಲಿರುವ ಸುಮಾರು 50ರಿಂದ 60 ನಾಟಕ ತಂಡಗಳು ಈಗ ಪ್ರದರ್ಶನ ನಿಲ್ಲಿಸಿದ್ದು ಬಹುತೇಕ ಕಲಾವಿದರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಾ ಕಡಿಮೆ 1,500ಕ್ಕೂ ಅಧಿಕ ನಾಟಕ ಕಲಾವಿದರಿದ್ದಾರೆ. ಮುಂದೆ ಕೆಲವೇ ದಿನಗಳಲ್ಲಿ ನಾಟಕ ಸೀಸನ್‌ ಮುಗಿದು ಮಳೆಗಾಲ ಎದುರಾಗುವುದರಿಂದ ನಾಟಕ ಮತ್ತೆ ಆರಂಭವಾಗಲು ಕೆಲವು ತಿಂಗಳು ಕಾಯಬೇಕಾಗಿದೆ.

ಬದುಕು ನಿರ್ವಹಣೆಯ ಸಮಸ್ಯೆ
ಕೋವಿಡ್  19 ದಿಂದಾಗಿ ತುಳುರಂಗಭೂಮಿ ಸ್ತಬ್ದವಾಗಿದೆ. ನಾಟಕವನ್ನೇ ನಂಬಿದ ಬಹುತೇಕ ಕಲಾವಿದರು ದಿನ ನಿರ್ವಹಣೆಗೆ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೆ ನಾಟಕ ಆರಂಭವಾಗಬೇಕಾದರೆ ಇನ್ನೂ ಕೆಲವು ದಿನ ಕಾಯಬೇಕಾಗಬಹುದು. ಹೀಗಾಗಿ ಕಲಾವಿದರು ಅತಂತ್ರರಾಗಿದ್ದಾರೆ. ಒಕ್ಕೂಟದ ವತಿಯಿಂದಲೂ ಕೆಲವು ಕಲಾವಿದರಿಗೆ ನೆರವು ನೀಡಲಾಗಿದೆ.
 - ಕಿಶೋರ್‌ ಡಿ. ಶೆಟ್ಟಿ, ಅಧ್ಯಕ್ಷರು, ತುಳು ನಾಟಕ ಕಲಾವಿದರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next