ರಾಯಚೂರು: ನಿಷ್ಕಲ್ಮಶ ನಗುವಿನ ಮೂಲಕ ಎಂಥವರನ್ನು ಬರಸೆಳೆಯುತ್ತಿದ್ದ ಜಿಲ್ಲೆಯ ಹಿರಿಯ ಸಾಹಿತಿ, ಸಾಂಸ್ಕೃತಿಕ ಲೋಕದ ರಾಯಭಾರಿ ಅಯ್ಯಪ್ಪ ತುಕ್ಕಾಯಿ ಬಾರದ ಲೋಕಕ್ಕೆ ತೆರಳಿದ್ದಾರೆ. ಬರವಣಿಗೆ, ತಮ್ಮ ವಿಶೇಷ ವ್ಯಕ್ತಿತ್ವದ ಮೂಲಕವೇ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಅವರು ಅಸಂಖ್ಯ ಶಿಷ್ಯ ಬಳಗವನ್ನಗಲಿದ್ದಾರೆ.
ಸಿಂಧನೂರು ಮೂಲದವರಾದ ತುಕ್ಕಾಯಿ, ಕೃಷಿಕ ಕುಟುಂಬದ ಹಿನ್ನೆಲೆಯುಳ್ಳವರು. ಎಂಎ, ಎಲ್‌ಎಲ್‌ಬಿ, ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದವರು. ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಅವರನ್ನು ಸಹಜವಾಗಿಯೇ ಸಾರಸ್ವತ ಲೋಕ ಬರಸೆಳೆದಿತ್ತು. ನಗರದ ಟ್ಯಾಗೋರ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಸ್ಪಿಲ್ ಪತ್ರಿಕೋದ್ಯಮ ಕಾಲೇಜಿನ ಪ್ರಾಚಾರ್ಯರಾಗಿ ತಮ್ಮ ಸೇವೆ ಮುಂದುವರಿಸಿದರು. ಸುಮಾರು 5 ದಶಕಗಳ ಕಾಲ ಅಕ್ಷರದೊಂದಿಗೆ ಅವರ ನಂಟು ಕಳೆದಿರಲಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ನಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಅವರು, ಅನೇಕ ಸ್ಮರಣೀಯ ಕಾರ್ಯಕ್ರಮಗಳನ್ನು ನಡೆಸಿದ್ದರು.
ಅಗಾಧ ಸ್ಮರಣ ಶಕ್ತಿ: ಅಯ್ಯಪ್ಪ ತುಕ್ಕಾಯಿ ಅವರನ್ನು ಅವರ ಶಿಷ್ಯರು ನೆನಪು ಮಾಡಿಕೊಳ್ಳುವುದೇ ಅವರ ಸ್ಮರಣ ಶಕ್ತಿಯಿಂದ. ಅವರು ಪಾಠ ಮಾಡಲು ನಿಂತರೆ ದಿನಾಂಕ, ಸಮಯ, ಇಸ್ವಿಯನ್ನು ಉಲ್ಲೇಖೀಸಿ ಬೋಧಿ ಸುತ್ತಿದ್ದರು. ಎಷ್ಟೋ ವರ್ಷಗಳ ಹಿಂದಿನ ವಿಚಾರಗಳು ಅವರ ನಾಲಿಗೆ ತುದಿಯಲ್ಲೇ ಇರುತ್ತಿದ್ದವು ಎನ್ನುವುದು ವಿಶೇಷ. ಅದಕ್ಕಿಂತ ಅವರ ಸಮಯ ಪಾಲನೆ ಕೂಡ ಅಷ್ಟೇ ಕಟ್ಟು ನಿಟ್ಟಿನದ್ದಾಗಿತ್ತು. ನಿತ್ಯ ಬೆಳಗ್ಗೆ 4:50ಕ್ಕೆ ಏಳುವುದು ಅವರ ದಿನಚರಿ. ಯಾವುದೇ ಕಾರ್ಯಕ್ರಮವಿರಲಿ ಹೇಳಿದ ಸಮಯಕ್ಕಿಂತ ಮುಂಚಿತವಾಗಿಯೇ ಅವರು ತಲುಪುತ್ತಿದ್ದರು.
ಉತ್ತಮ ನಿರೂಪಕ, ಬರಹಗಾರ: ಅಯ್ಯಪ್ಪ ತುಕ್ಕಾಯಿ ಅವರು ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಅಂದಾಜು 800 ಬಿಡಿ ಲೇಖನಗಳು, 375ಕ್ಕೂ ಅಧಿಕ ಸಂದರ್ಶನ ಬರಹಗಳು, 300ಕ್ಕೂ ಅ ಧಿಕ ಪುಸ್ತಕ ಪರಿಚಯ ಬರಹಗಳು ಅವರ ಬರವಣಿಗೆಗೆ ಹಿಡಿದ ಕೈಗನ್ನಡಿ. ಅದರ ಜತೆಗೆ ಅನೇಕ ಸಾಂದರ್ಭಿಕ ಲೇಖನಗಳು, ವಿಶೇಷ ಲೇಖನಗಳನ್ನು ಬರೆಯುವ ಮೂಲಕ ತಮ್ಮೊಳಗಿನ ಬರಹಗಾರನನ್ನು ಸದಾ ಜಾಗೃತನನ್ನಾಗಿಸುತ್ತಿದ್ದರು. ಅದರ ಜತೆಗೆ ಯಾವುದೇ ಸಾಂಸ್ಕೃತಿಕ, ಸಾಹಿತ್ಯಿಕ ಸಮಾರಂಭಗಳಲ್ಲಿ ಮುಂಚೂಣಿಯಲ್ಲಿದ್ದು, ತಾವೇ ನಿರೂಪಕರಾಗಿ ತೊಡಗಿಕೊಳ್ಳುತ್ತಿದ್ದರು. ಜಿಲ್ಲಾಡಳಿತದ ಸಭೆ ಸಮಾರಂಭಗಳಲ್ಲೂ ಸರಿ ಸುಮಾರು ಎರಡು ದಶಕಗಳ ಕಾಲ ನಿರೂಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪತ್ರ ಬರೆಯುತ್ತಿದ್ದರು: ತಂತ್ರಜ್ಞಾನ ಎಷ್ಟೇ ಮುಂದುವರಿದೂ ಇಮೇಲ್ ಮೊಬೈಲ್ ಬಳಕೆ ಕಾಲದಲ್ಲೂ ಅವರು ತಮ್ಮ ಒಡನಾಡಿಗಳ ಜತೆ ಪತ್ರ ವ್ಯವಹಾರ ಹೊಂದಿರುತ್ತಿದ್ದರು. ಯೋಗಕ್ಷೇಮ ವಿಚಾರಣೆ, ಅಭಿನಂದನೆ, ಶುಭಾಶಯ ತಿಳಿಸಲು ಅವರು ಅಂಚೆ ಕಾರ್ಡ್‌ಗಳನ್ನೇ ಬಳಸುತ್ತಿದ್ದದ್ದು ವಿಶೇಷ. ವಯಸ್ಸಿನ ಹಂಗಿಲ್ಲದೇ ಎಲ್ಲರನ್ನೂ ಗೌರವದಿಂದ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಅವರ ವ್ಯಕ್ತಿತ್ವ ಅವರನ್ನು ಎತ್ತರದ ಸ್ಥಾನಕ್ಕೆ ಕರೆದೊಯ್ದಿತ್ತು. ತಮ್ಮ ವಿಭಿನ್ನ ಬೋಧನೆ, ಆಪ್ಯಾಯತೆ ಮೂಲಕ ಅನೇಕ ಶಿಷ್ಯರನ್ನು ಗಳಿಸಿರುವ ಅವರು, ಇಂದು ಕಾಣದಲೋಕಕ್ಕೆ ತೆರಳಿದ್ದಾರೆ. ದೇಶ, ವಿದೇಶಗಳಲ್ಲಿರುವ ಅವರ ಶಿಷ್ಯ ಬಳಗ ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತಿದೆ.
ಹೃದಯ ಕಾಯಿಲೆ: ಅಯ್ಯಪ್ಪ ತುಕ್ಕಾಯಿ ಹೃದಯ ಸಂಬಂಧಿ
ಕಾಯಿಲೆಯಿಂದ ಬಳಲುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗ, ಶಿಷ್ಯರು ಇದ್ದಾರೆ. ನಗರದ ಬೋಳಮಾನದೊಡ್ಡಿ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.
ಕಸಾಪಕ್ಕೆ ಸೇವೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ 20 ವರ್ಷಗಳಿಗೂ ಅಧಿಕ ಕಾಲ ಸಕ್ರಿಯರಾಗಿದ್ದ ಅವರು 2010-13ರವರೆಗೆ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಅಧಿಕಾರದ ಇತಿಮಿತಿಯೊಳಗೆ ಉತ್ತಮ ಸಾಹಿತ್ಯ ಚಟುವಟಿಕೆ ನಡೆಸುವ ಮೂಲಕ ಗಮನ ಸೆಳೆದಿದ್ದರು. ಅವರ ಅವ ಧಿಯಲ್ಲಿ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಲಾಗಿತ್ತು.