ತೆಲಸಂಗ: ಗ್ರಾಮದಲ್ಲಿ ಮೂರ್‍ನಾಏಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಳಿದುಳಿದಿದ್ದ ತೊಗರಿ ಬೆಳೆಯೂ ಕೈಗೆಟಕದ ಸ್ಥಿತಿ ತಲುಪಿದ್ದು, ತೊಗರಿ ಬೆಳೆ ಮಾಡಿದ್ದ ರೈತನಿಗೆ ಸಂಕಷ್ಟ ಎದುರಾಗಿದೆ.
ತೆಲಸಂಗ ಹೋಬಳಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸತತವಾಗಿ ಸುರಿದ ಮಳೆ, ಮೋಡಕವಿದ ತಂಪು ವಾತಾವರಣ, ಹೊಲಗಳಲ್ಲಿ ನಿಂತ ನೀರಿನಿಂದ ತೊಗರಿ ಗಿಡದ ಬೇರು ಕೊಳೆತಿದೆ. ಮತ್ತೆ ಕೆಲವಡೆ ನೆಟಿರೋಗ ಕಾಣಿಸಿಕೊಂಡಿದೆ. ತೋಗರಿ ಹೂವು ಮತ್ತು ಮೊಗ್ಗು ಉದುರಿ ಗಿಡ ಅರಿಶಿಣ ಬಣ್ಣಕ್ಕೆ ತಿರುಗಿ ಒಣಗುತ್ತಿರುವುದರಿಂದ ತೊಗರಿ ಬೆಳೆ ಮಾಡಿದ ರೈತ ಕಷ್ಟಕ್ಕೆ ಸಿಲುಕಿದ್ದಾನೆ.
ಪ್ರಸಕ್ತ ವರ್ಷ ಗ್ರಾಮದಲ್ಲಿ 6679ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಮಾಡಿದ್ದಾರೆ. ಸದ್ಯದ ಹವಾಮಾನ ಶೆ.90ರಷ್ಟು ಬೆಳೆ ಕೈಗೆಟುಕದ ಸ್ಥಿತಿ ತಂದೊಡ್ಡಿದೆ. ಕೆಲವರು ಬೆಳೆ ಕಿತ್ತು ಹಾಕಿ ಜೋಳ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಕಿತ್ತು ಬೇರೆ ಬೆಳೆ ಮಾಡಿದರೆ ಅದು ಕೈ ಹಿಡಿಯುತ್ತದೆಯೋ ಅಥವಾ ಮತ್ತಷ್ಟು ಸಾಲ ಹೊರೆ ಆದೀತೆಂದು ಅಂಜಿ ಕೈ ಚೆಲ್ಲಿ ಕುಳಿತಿದ್ದಾರೆ. ಒಟ್ಟಾರೆ ಪ್ರಸಕ್ತ ವರ್ಷವೂ ಸೇರಿ ಹಿಂದಿನ 4ವರ್ಷಗಳಿಂದ ಈ ಭಾಗದ ತೊಗರಿ ಬೆಳೆ ಮಾಡುವ ರೈತ ಹಾನಿಯಲ್ಲಿದ್ದಾನೆ.
ಸಿಡಿ ರೋಗದ ಜತೆಗೆ ಪ್ರಸಕ್ತ ವರ್ಷದ ಅತಿವೃಷ್ಟಿಯಿಂದ ಬದುಕಿಗೆ ಆಸರೆ ಆಗಿದ್ದ ತೊಗರಿ ಬೆಳೆ ಕೈ ಕೊಟ್ಟಿದೆ. ವಾಣಿಜ್ಯ ಬೆಳೆಗಳಿಗೆ ಪರಿಹಾರ ಕೊಡುತ್ತಾರೆ. ಕೂಲಿ ಮಾಡಿ ಬದುಕುವ ಒಣ ಬೇಸಾಯದಲ್ಲಿ ಜೀವನ ನಡೆಸುವ ರೈತನಿಗೆ ನಷ್ಟವಾದರೆ ಯಾರೊಬ್ಬರೂ ಹೊರಳಿಯೂ ನೋಡುವುದಿಲ್ಲ. ಬೇಸಿಗೆಯಲ್ಲಿ ಭೂಮಿ ಹದಗೊಳಿಸಲು ಮತ್ತು ಬಿತ್ತನೆಗೆ ಮಾಡಿದ ಸಾಲ ಮರಳಿಸುವಷ್ಟಾದರೂ ಸರಕಾರ ಪರಿಹಾರ ನೀಡಬೇಕು. ರವಿ ಸಿಂಧೆ, ತೊಗರಿ ಬೆಳೆದ ರೈತ.
ಹತ್ತಾರು ವರ್ಷಗಳಿಂದ ಒಂದೇ ಭೂಮಿಯಲ್ಲಿ ಮತ್ತೆ ಮತ್ತೆ ತೊಗರಿ ಬೆಳೆ ಮಾಡುವುದರಿಂದ ಬೆಳೆ ಬರೋದಿಲ್ಲ. ಪ್ರಸಕ್ತ ವರ್ಷ ಮಳೆಯಿಂದಾದ ಹಾನಿಯ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. –
ಯಂಕಪ್ಪ ಉಪ್ಪಾರ. ಕೃಷಿ ಅಧಿಕಾರಿ, ತೆಲಸಂಗ