ಬಸವನಬಾಗೇವಾಡಿ: ಪ್ರತಿಯೊಬ್ಬರೂ ಧನ ಸಂಪತ್ತು ಗಳಿಸುವುದಕ್ಕಿಂತ ಹೆಚ್ಚು ಜನ ಸಂಪತ್ತು ಗಳಿಸಬೇಕು ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಮಹಾರಾಜ ಮಠದ ಮುಂಭಾಗದಲ್ಲಿ ನಡೆದ ಸಿದ್ರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಎಂದಿಗೂ ಪಶ್ಚಾತಾಪ ಪಡುವ ಕಾರ್ಯ ಮಾಡಬಾರದು. ಸತ್ಸಂಗದಲ್ಲಿ ಭಾಗವಹಿಸುವುದರಿಂದ ಅಧ್ಯಾತ್ಮ ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯ ಎಂದರು.
ನಾವು ಗಳಿಸುವ ಆಸ್ತಿ, ಅಂತಸ್ತು, ಐಶ್ವರ್ಯದಲ್ಲಿ ಸಿಗದ ತೃಪ್ತಿ ದಾನ ಧರ್ಮದಲ್ಲಿ ಸಿಗುತ್ತದೆ. ಜೀವನದಲ್ಲಿ ದುರ್ಗುಣಗಳನ್ನು ಬೆಳೆಸಿಕೊಳ್ಳದೆ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಭಗವಂತ ನಮಗೆ ಕೊಟ್ಟಿರುವ ಜೀವನ ಕುರಿತು ತಕರಾರು ಮಾಡದೇ ಸಂತೃಪ್ತ ಜೀವನ ಸಾಗಿಸಬೇಕು. ಆಗ ನಾವು ಪರಿಪಕ್ವ ವ್ಯಕ್ತಿಗಳಾಗುತ್ತೇವೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಜನನ ಆಕಸ್ಮಿಕ, ಮರಣ ನಿಶ್ಚಿತ. ಜನನ- ಮರಣಗಳ ನಡುವಿನ ಅವ ಧಿಯ ಜೀವನವನ್ನು ಸುಂದರವಾಗಿ ಕಳೆಯುವ ಕಡೆಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಎಲ್ಲರೂ ಆರೋಗ್ಯಕರ ಜೀವನ ನಡೆಸಬೇಕೆಂದು ಹೇಳಿದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ. ಕನೇರಿ ಮಠ ಧರ್ಮ ಪ್ರಸಾರ ಮಾಡುವುದರ ಜೊತೆಗೆ ಕೃಷಿ ಕಾಯಕ ಮಾಡುವ ಮೂಲಕ ಕಾಯಕದ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸನಾತನ ಧರ್ಮ ಪರಂಪರೆ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು ಶ್ಲಾಘನೀಯ ಎಂದರು.
ಕೃಷ್ಣಾನಂದ ಶ್ರೀ, ಅಭಯಾನಂದ ಶ್ರೀ, ಗಿರೀಶಾನಂದ ಶ್ರೀ, ಶಿವಶರಣಾನಂದ ಶ್ರೀ, ತುಕಾರಾಮ ಶ್ರೀ, ಅಪ್ಪುಗೌಡ ಪಾಟೀಲ, ಹನುಮಂತ ಸೋನಾವನಿ, ಪ್ರಕಾಧ ಮಾಮನಕರ, ಸಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ಗೊಳಸಂಗಿ, ನೀಲಪ್ಪ ನಾಯಕ, ಪ್ರವೀಣ ಪವಾರ, ವಿನೂತ ಕಲ್ಲೂರ, ಬಸವರಾಜ ಗಚ್ಚಿನವರ, ಶಿವಾನಂದ ತೊಳನೂರ, ಬಸವರಾಜ ನಾಯ್ಕೋಡಿ, ಬಸವರಾಜ ಶೆಂಡೆ, ಶಿವಾನಂದ ಮಂಟಾನವರ, ಬಸವರಾಜ ಚಿಂಚೊಳ್ಳಿ ಇದ್ದರು.