Advertisement

ವಿದ್ಯೆಯೊಂದಿಗೆ ಮಾನವೀಯತೆ ಬೆಳೆಸಿಕೊಳ್ಳಿ

09:35 PM Jan 01, 2020 | Lakshmi GovindaRaj |

ಮೈಸೂರು: ಯುವಜನರಿಗೆ ಜಲಪಾತದಷ್ಟು ರಭಸ, ಸಿಡಿಲಿನಷ್ಟು ಶಕ್ತಿ ಇರುತ್ತದೆ. ಅದನ್ನು ಸೂಕ್ತ ರೀತಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಹೇಳಿದರು. ಮಹಾರಾಣಿ ಕಲಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟ, ನೆಹರು ಯುವ ಕೇಂದ್ರ ಹಾಗೂ ಮಹಾರಾಣಿ ಕಲಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಮಾನವೀಯತೆ ಬೆಳೆಸಿಕೊಳ್ಳಿ: ಯುವಜನರಿಗೆ ದೈಹಿಕ ಹಾಗೂ ಮಾನಸಿಕ ಶಕ್ತಿ ಸಾಕಷ್ಟಿರುತ್ತದೆ. ಅದನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಂಡು ಸಾಧನೆ ಮಾಡಬೇಕು. ತಮಗಿರುವ ಅಪಾರ ಶಕ್ತಿಯೊಂದಿಗೆ ಕೊಂಚ ಮೂರ್ಖತನ ಹಾಗೂ ಹಠ ಸಹ ಇರುತ್ತದೆ. ಅದನ್ನೆಲ್ಲಾ ನಿಯಂತ್ರಿಸುವುದಕ್ಕೆ ಪೋಷಕರು, ಗುರುಗಳು ಇರುತ್ತಾರೆ. ತಮ್ಮ ಸಾಮರ್ಥ್ಯ ಬಳಸಿಕೊಂಡು ಹೆಚ್ಚು ಸಾಧನೆ ಮಾಡುವತ್ತ ಗಮನ ಹರಿಸಬೇಕು. ಯುವ ಸಮುದಾಯ ವಿದ್ಯೆಯೊಂದಿಗೆ ಮಾನವೀಯತೆಯನ್ನೂ ಬೆಳೆಸಿಕೊಳ್ಳಬೇಕು. ನಾವೂ ನೆಮ್ಮದಿಯಿಂದಿರುವುದರ ಜೊತೆಗೆ ಇತರರು ನೆಮ್ಮದಿಯಿಂದಿರಲು ಬಿಡಬೇಕು. ದೇಶದಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು ಸಹಕರಿಸಬೇಕು ಎಂದು ತಿಳಿಸಿದರು.

ಇಲ್ಲಿ ಗೆದ್ದವರು ರಾಜ್ಯಮಟ್ಟಕ್ಕೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ವಿಜೇತರಾದವರು ಜನವರಿ ತಿಂಗಳ ಕೊನೆಯಲ್ಲಿ ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿ ವಿಜೇತರಾದವರು ಫೆ.12ರಿಂದ ಫೆ.16ರವರೆಗೂ ಉತ್ತರಪ್ರದೇಶದ ಲಖನೌನಲ್ಲಿ ನಡೆಯುವ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.

ಶಾಸ್ತ್ರೀಯ ನೃತ್ಯ(ಭರತನಾಟ್ಯ, ಕುಚಿಪುಡಿ, ಕಥಕ್‌, ಮಣಿಪುರಿ, ಒಡಿಸ್ಸಿ), ಶಾಸ್ತ್ರೀಯ ವಾದ್ಯ (ಸಿತಾರ್‌, ಕೊಳಲು, ತಬಲ, ವೀಣೆ, ಮೃದಂಗ) ಹಾರ್ಮೋನಿಯಂ, ಗಿಟಾರ್‌, ಶಾಸ್ತ್ರೀಯ ಗಾಯನ (ಕರ್ನಾಟಕ ಮತ್ತು ಹಿಂದೂಸ್ಥಾನಿ), ಆಶುಭಾಷಣ (ಹಿಂದಿ ಅಥವಾ ಇಂಗ್ಲಿಷ್‌) ಏಕಾಂಗಿ ನಾಟಕ (ಹಿಂದಿ ಅಥವಾ ಇಂಗ್ಲಿಷ್‌), ಜನಪದ ಗೀತೆ, ಜನಪದ ನೃತ್ಯ ಸ್ಪರ್ಧೆಗಳು ನಡೆದವು.

ಮೇಯರ್‌ ಪುಷ್ಪಲತಾ ಜಗನ್ನಾಥ್‌, ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಸುರೇಶ್‌, ನೆಹರು ಯುವಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ, ಡಾ.ಎಂ.ಪಿ.ಉಷಾ, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲ ಬಿ.ಟಿ.ವಿಜಯ್‌, ಮನೋವಿಜ್ಞಾನ ವಿಭಾಗದ ಅಧ್ಯಾಪಕಿ ಮನೋನ್ಮಣಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next