Advertisement

ಹಳ್ಳಿ ವಿದ್ಯಾರ್ಥಿಗಳಿಗೆ ಸಿಯುಇಟಿ ಕಂಟಕ?

01:35 AM Apr 13, 2022 | Team Udayavani |

ಬೆಂಗಳೂರು: ಗುಣಮಟ್ಟದ ಶಿಕ್ಷಣ ನೆಪದಲ್ಲಿ ವಿಶ್ವವಿದ್ಯಾ ನಿಲಯಗಳ ಅನುದಾನ ಆಯೋಗ (ಯುಜಿಸಿ) ರಾಷ್ಟ್ರಮಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ವಿ.ವಿ.ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಗೆ ಆಕ್ಷೇಪ ವ್ಯಕ್ತವಾಗಿದೆ. ಇದು ಗ್ರಾಮೀಣ ಪ್ರದೇಶ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ

Advertisement

ಶಿಕ್ಷಣದ ಕನಸನ್ನು ಕಿತ್ತುಕೊಳ್ಳಲಿದೆ ಎಂಬ ಆತಂಕ ಆರಂಭವಾಗಿದೆ. ಸದ್ಯ ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರ ಸಿಇಟಿ ಇದೆ. ಇದನ್ನು ಪದವಿ ಕೋರ್ಸ್‌ಗಳಿಗೂ ವಿಸ್ತರಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಿಂದೆ ಸರಿಯಬಹುದು ಎಂದು ತಜ್ಞರು ಅಭಿ ಪ್ರಾಯ ಪಡುತ್ತಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಗ್ರಾಮೀಣ ಭಾಗದಲ್ಲಿ ಸೂಕ್ತ ಮಾರ್ಗದರ್ಶನ ಅಥವಾ ವಿಷಯ ತಜ್ಞರು ಇರುವುದಿಲ್ಲ. ಕೆಲವೆಡೆ ಗುಣ ಮಟ್ಟದ ಶಿಕ್ಷಣ ದೊರೆತರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿಲ್ಲ. ಗ್ರಾಮೀಣ ವಿದ್ಯಾರ್ಥಿಗಳು ಈಗಾಗಲೇ ನೀಟ್‌, ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದುಳಿಯುತ್ತಿದ್ದಾರೆ. ಇದಕ್ಕೆ ಪದವಿ ಕೋರ್ಸ್‌ ಕೂಡ ಸೇರ್ಪಡೆಯಾಗಬಹುದು ಎಂಬುದು ತಜ್ಞರ ಆತಂಕ.

ವಂಚಿತರಾಗುವ ಆತಂಕ
ಸಾಮಾನ್ಯವಾಗಿ ಉನ್ನತ ಶ್ರೇಣಿ ಪಡೆದಿರುವವರು ವಿಜ್ಞಾನ ವಿಭಾಗ ಆಯ್ದುಕೊಳ್ಳುತ್ತಾರೆ. ಮುಂದಿನ ಆಯ್ಕೆ ವಾಣಿಜ್ಯಶಾಸ್ತ್ರ. ಕನಿಷ್ಠ ಉತ್ತೀರ್ಣ ಆಗಿರುವವರು ಕಲಾ ವಿಭಾಗ ಸೇರಿಕೊಳ್ಳುತ್ತಾರೆ. ರಾಜ್ಯ ಸರಕಾರ ಯಾವುದೇ ವಿದ್ಯಾರ್ಥಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಹೊಂದಿದೆ. ಹೀಗಾಗಿ ಮತ್ತೂಂದು ಪರೀಕ್ಷೆಯ  ಅಗತ್ಯವಿಲ್ಲ ಎಂದು ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಡಾ| ಎನ್‌. ಪ್ರಭುದೇವ್‌ ಹೇಳುತ್ತಾರೆ.

ಒಂದಲ್ಲ ಒಂದು ಕೋರ್ಸ್‌ಗಾಗಿ ಸಿಇಟಿ ಎದುರಿಸಲೇಬೇಕು ಎಂದಾ ದಾಗ ಸಹಜವಾಗಿಯೇ ಕೋಚಿಂಗ್‌ ಮಾಫಿಯಾ ಗ್ರಾಮೀಣ ಪ್ರದೇಶ ಗಳಿಗೂ ಹರಡಬಹುದು. ಇದರಿಂದ ಉನ್ನತ ಶಿಕ್ಷಣ ವ್ಯವಸ್ಥೆ ಹದಗೆಡಲಿದೆ ಎಂದು ಪ್ರಭುದೇವ್‌ ಹೇಳಿದ್ದಾರೆ.

Advertisement

ವಿದ್ಯಾರ್ಥಿಗಳಿಗೆ ಹೊರೆ
ದ್ವಿತೀಯ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ವರ್ಷಪೂರ್ತಿ ಸಿದ್ಧತೆ ನಡೆಸಿರುತ್ತಾರೆ. ಈ ಪರೀಕ್ಷೆ ನಡೆದ ತಿಂಗಳೊಳಗೆ ಮತ್ತೊಂದು ಪರೀಕ್ಷೆ ಎದುರಿಸುವುದು ಹೊರೆಯಾಗಲಿದೆ. ಇದರಿಂದ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಬಹುದು. ದ್ವಿತೀಯ ಪಿಯುಸಿ ಅಂಕಗಳನ್ನು ಪರಿಗಣಿಸದೆ ಸಿಇಟಿ ಅಂಕ ಮಾತ್ರ ಪರಿಗಣಿಸುವ ನಿಯಮದಿಂದಲೂ ತೊಂದರೆ ಆಗಬಹುದು ಎಂದು ಬೆಂಗಳೂರು ವಿ.ವಿ.ಯ ವಿಶ್ರಾಂತ ಕುಲಪತಿ ಡಾ| ಎಂ.ಎಸ್‌. ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ವೈದ್ಯ ಕೋರ್ಸ್‌ ಪ್ರವೇಶದ ನೀಟ್‌ ವಿಫ‌ಲವಾಗಿದೆ. ಇಂಥ ಸಮಯದಲ್ಲಿ ಸಾಮಾನ್ಯ ಪದವಿಗಳಿಗೂ ಸಿಇಟಿ ಏರ್ಪಡಿಸಿದರೆ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.
-ಡಾ| ಎನ್‌. ಪ್ರಭುದೇವ್‌, ವಿಶ್ರಾಂತ ಕುಲಪತಿ

ಸಿಯುಇಟಿಯಿಂದ ವಿದ್ಯಾರ್ಥಿಗಳಲ್ಲಿ ಪರಕೀಯ ಭಾವ ಹುಟ್ಟಲಿದೆ. ಉನ್ನತ ಶಿಕ್ಷಣದ ಸ್ವಾಯತ್ತೆ ಮತ್ತು ಕಾರ್ಯಭಾರಕ್ಕೆ ಅಡ್ಡಿ ಯಾಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ತತ್‌ಕ್ಷಣ ಮತ್ತೂಂದು ಪರೀಕ್ಷೆಗೆ ಸಿದ್ಧತೆ ಹೊರೆಯಾಗಲಿದೆ.
– ಡಾ| ಎಂ.ಎಸ್‌. ತಿಮ್ಮಪ್ಪ , ವಿಶ್ರಾಂತ ಕುಲಪತಿ

- ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next