Advertisement

Water shortage: ಕಬ್ಬನ್‌ಪಾರ್ಕ್‌ನ ಬಾಲಭವನ ಬೋಟಿಂಗ್‌ಗೂ ನೀರಿನ ಬರ

10:32 AM Mar 18, 2024 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ಮಳೆ ನೀರು ಆಧಾರಿತ ಬೋಟಿಂಗ್‌ ವ್ಯವಸ್ಥೆಗೆ ನೀರಿನ “ಬರ’ದ ಬಿಸಿ ತಟ್ಟಿದೆ.

Advertisement

ಕಬ್ಬನ್‌ಪಾರ್ಕ್‌ ಆವರಣದಲ್ಲಿರುವ ಜವಾಹರ ಬಾಲಭವನಕ್ಕೆ ಕಳೆದ ವರ್ಷ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಚಟುವಟಿಕೆಗಳನ್ನು ಪರಿಚಯಿಸಲಾಗಿದ್ದು, ಮುಖ್ಯವಾಗಿ ಪುಟಾಣಿ ರೈಲು, ಬೋಟಿಂಗ್‌ ವ್ಯವಸ್ಥೆ ಪ್ರಾರಂಭಿಸಲಾಗಿತ್ತು. ಈ ಬೋಟಿಂಗ್‌ ಮಳೆ ನೀರಿನ ಆಶ್ರಯವಾಗಿದ್ದು, ಕಬ್ಬನ್‌ಪಾರ್ಕ್‌ನಿಂದ ಯುಬಿ ಸಿಟಿ ಮಾರ್ಗವಾಗಿ ರಾಜಕಾಲುವೆಗೆ ಹರಿದುಬರುವ ನೀರಿಗೆ ಬಾಲಭವನದ ಕ್ಯಾಂಟೀನ್‌ ಹಿಂಭಾಗದಲ್ಲಿ ದ್ವೀಪದ ರೂಪ ಕೊಟ್ಟು, ಅದರ ಸುತ್ತಲಿನ ಕೊಳದಲ್ಲಿ ದೋಣಿ ವಿಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ದ್ವೀಪದ 1 ಭಾಗದಲ್ಲಿ 5-6 ಅಡಿ ಆಳ, ಮತ್ತೂಂದು ಕಡೆಗೆ 4-6 ಅಡಿ ಆಳ ಇರುವ ಕೊಳ ನಿರ್ಮಿಸಿದ್ದು, ಇದರಲ್ಲಿ ಮಕ್ಕಳು, ಸಾರ್ವಜನಿಕರಿಗೂ ಬೋಟಿಂಗ್‌ ಒದಗಿಸಲಾಗಿದೆ. ವಾರದ ದಿನಗಳಲ್ಲಿ ಸಾವಿರಾರು ಜನ ಭೇಟಿ ನೀಡಿದರೆ, ವಾರಾಂತ್ಯದಲ್ಲಿ 4-5 ಸಾವಿರ ಜನ ಆಗಮಿಸುತ್ತಾರೆ.

ಬಾಲಭವನದಲ್ಲಿರುವ ಆಟಿಕೆಗಳು ಮಕ್ಕಳಿಗೆ ಸೀಮಿತವಾಗಿದ್ದರೆ, ಬೋಟಿಂಗ್‌ನಲ್ಲಿ ವಯಸ್ಕರಿಗೂ ಅವಕಾಶ ಇದೆ. 10 ವರ್ಷದೊಳಗಿನ ಮಕ್ಕಳಿಗೆ ಉಚಿತವಾದರೆ, 10 ವರ್ಷ ಮೇಲ್ಪಟ್ಟವರಿಗೆ 10 ರೂ., ವಯಸ್ಕರಿಗೆ 30 ರೂ. ದರ ನಿಗದಿ ಮಾಡಲಾಗಿದೆ. ಆದರೆ, ಇದೀಗ ನೀರಿನ ಅಭಾವ ಸೃಷ್ಟಿಯಾಗಿದ್ದು, ಬೋಟಿಂಗ್‌ ಮಾಡುವ ಕೊಳದಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಜತೆಗೆ ಈ ನೀರು ನಿಂತ ನೀರಾಗಿರುವ ಕಾರಣ ಹಸಿರು ಬಣ್ಣಕ್ಕೆ ತಿರುಗಿದೆ. ದೋಣಿ ವಿಹಾರ ವೇಳೆ ಜನರು ನೀರಿಗೆ ಕೈ ಹಾಕುವಷ್ಟು ನೀರು ಯೋಗ್ಯವಾಗಿಲ್ಲ. ಮರಗಳ ಎಲೆ ಉದುರಿದ್ದು, ಕೆಟ್ಟ ವಾಸನೆ ಬೀರುತ್ತದೆ.

ಕಬ್ಬನ್‌ ಪಾರ್ಕಿನಿಂದ ನೀರು ಹರಿದುಬರದ ಕಾರಣ ಬೋಟಿಂಗ್‌ ಕೊಳದಲ್ಲಿ ನೀರು ಕಡಿಮೆಯಾಗಿದೆ. ಸದ್ಯ ಒಂದೂವರೆ ಅಡಿ ನೀರಿನ ಸಂಗ್ರಹ ಇದ್ದು, ಅದರಲ್ಲೇ ಬೋಟಿಂಗ್‌ ನಡೆಸಲಾಗುತ್ತಿದೆ. ಇದಕ್ಕೂ ನೀರಿನ ಪ್ರಮಾಣ ಕಡಿಮೆಯಾಗಿದ್ದಲ್ಲಿ ಬೋಟಿಂಗ್‌ಅನ್ನು ಮಳೆ ಬರುವವರೆಗೂ ಸ್ಥಗಿತಗೊಳಿಸಲಾಗುತ್ತದೆ ಎಂದು ಜವಾಹಲ ಬಾಲಭವನದ ಕಾರ್ಯದರ್ಶಿ ಬಿ.ಎಚ್‌.ನಿಶ್ಚಲ್‌ ತಿಳಿಸುತ್ತಾರೆ.

Advertisement

ಬಾಲಭವನದಲ್ಲಿನ ಬೋಟಿಂಗ್‌ ವ್ಯವಸ್ಥೆಯ ಕೊಳದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ರಾಜಕಾಲುವೆಗೆ ಹರಿಯುವುದು ನಿಂತಿದೆ. ಶೀಘ್ರ ಮಳೆ ಬರದಿದ್ದರೆ, ಬೋಟಿಂಗ್‌ ಸ್ಥಗಿತಗೊಳಿಸಲಾಗುತ್ತದೆ. -ಬಿ.ಎಚ್‌.ನಿಶ್ಚಲ್‌, ಜವಾಹಲ ಬಾಲಭವನದ ಕಾರ್ಯದರ್ಶಿ.  

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next