ಬೆಂಗಳೂರು: ಸಂಚಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋ ಪದ ಮೇಲೆ ಮೂವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಕೋಗಿಲು ಕ್ರಾಸ್ ನಿವಾಸಿ ದಯಾನಂದ ಸಾಗರ್(31), ಆತನ ಸ್ನೇಹಿತರಾದ ಕಟ್ಟಿಗೆಹಳ್ಳಿ ನಿವಾಸಿಗಳಾದ ಮಂಜುನಾಥ್ ಮತ್ತು ವೀರೇಂದ್ರ ಬಂಧಿತರು.
ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿದೆ. ಏ.22ರಂದು ರಾತ್ರಿ ಆರೋಪಿಗಳು ಕೋಗಿಲು ಕ್ರಾಸ್‌ನ ಬಾರ್ ವೊಂದರಲ್ಲಿ ಮದ್ಯ ಸೇವಿಸಿ ಕಾರಿನಲ್ಲಿ ಕಬಾಬ್ ತಿನ್ನಲು ಬ್ರಿಗೇಡ್ ರಸ್ತೆಗೆ ಬಂದಿದ್ದರು. ಈ ವೇಳೆ ಸಿಟಿಒ ವೃತ್ತದಲ್ಲಿ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಕಾರು ನಿಲ್ಲಸಿದ್ದಾರೆ. ಆದರೆ, ಕಾರಿನ ಕಿಟಕಿಗಳನ್ನು ತೆರೆಯದೆ, ಡೋರ್ ಗಳನ್ನು ಲಾಕ್ ಮಾಡಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಸಂಚಾರ ಪೊಲೀಸರು ಕಾರಿನ ಸುತ್ತ ಬ್ಯಾರಿಕೇಡ್ ಮತ್ತು ಚಕ್ರಗಳಿಗೆ ವೀಲ್ ಕ್ಲಾಂಪ್ ಹಾಕಿದ್ದರು. ಒಂದೂವರೆ ಗಂಟೆಗಳ ಬಳಿಕ ಎಚ್ಚರಗೊಂಡ ದಯಾನಂದ ಸಾಗರ್, ಏಕಾಏಕಿ ಕಾರು ಚಾಲನೆ ಮಾಡಿಕೊಂಡು ಬ್ಯಾರಿಕೇಡ್ ಸಮೇತ ಕಾರು ಚಾಲನೆ ಮಾಡಿದ್ದು, ಎದುಗಡೆ ನಿಂತಿದ್ದ ಸಿಬ್ಬಂದಿ ಮೇಲೆ ಹರಿಸಲು ಮುಂದಾಗಿದ್ದಾರೆ.
ನಂತರ ಹೈಗ್ರೌಂಡ್ಸ್ ಸಂಚಾರ ಠಾಣೆ ಅಧಿಕಾರಿಗಳ ಜತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಕೆ.ಆರ್.ರಸ್ತೆ ಬಳಿ ಬಂಧಿಸಿ, ಠಾಣೆಗೆ ಕರೆತರಲಾಗಿದೆ. ಮೂವರು ಮದ್ಯ ಸೇವಿಸಿರುವುದು ಖಚಿತವಾಗಿದೆ. ಹೀಗಾಗಿ ಆರೋಪಿ ಚಾಲಕ ದಯಾನಂದ ಸಾಗರ್ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಜತೆಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ದೂರು ನೀಡಿದ್ದು, ಮೂವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ದಯಾನಂದ ಸಾಗರ್ ವಿರುದ್ಧ ಈ ಹಿಂದೆಯೂ ಮದ್ಯ ಸೇವಿಸಿವಾಹನ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೂಮ್ಮೆ ಪ್ರಕರಣ ದಾಖಲಾದರೆ ಚಾಲನಾ ಪರವಾನಿಗೆ ರದ್ದು ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ರವಾನಿಸುತ್ತಾರೆ ಎಂಬ ಭಯದಲ್ಲಿ ಬ್ಯಾರಿಕೇಡ್ ಸಮೇತ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾನೆ ಎಂದು ವಿಚಾರಣೆಯಲ್ಲಿ ಹೇಳಿಕೆ ನೀಡುತ್ತಿದ್ದಾನೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ದಯಾನಂದ ಸಾಗರ್, ಯಲಹಂಕದ ಸಿಆರ್‌ಪಿ ಎಫ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕನಾಗಿದ್ದು, ಮಂಜುನಾಥ್ ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ್ದಾನೆ. ವೀರೇಂದ್ರಗೆ ಯಾವುದೇ ಕೆಲಸ ಇಲ್ಲ. ಏ.22ರಂದು ರಾತ್ರಿ ಕಬಾಬ್ ತಿನ್ನಲು ಬ್ರಿಗೇಡ್ ರಸ್ತೆಗೆ ಬಂದು, ವಾಪಸ್ ಹೋಗುವಾಗ ಅಪರಾಧ ಎಸಗಿದ್ದಾರೆ. ಅಲ್ಲದೆ, ಆರೋಪಿಗಳ ಪೈಕಿ ಒಬ್ಬ ನಿವೃತ್ತ ಪೊಲೀಸ್ ಅಧೀಕ್ಷರೊಬ್ಬರ ಪುತ್ರ ಎಂದು ಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.