Advertisement

ಕಬ್ಬನ್‌ ಪಾರ್ಕ್‌ಗೆ ಈಗ ಜೀವಕಳೆ

12:58 AM May 18, 2019 | Lakshmi GovindaRaj |

ಬೆಂಗಳೂರು: ಕಬ್ಬನ್‌ ಪಾರ್ಕ್‌ನ ಗಿಡ ಮರಗಳಿಗೆ ನೀರುಣಿಸುವ ಜೊತೆಗೆ ಇಡೀ ಪರಿಸರವನ್ನು ತಂಪಾಗಿರುವ ನಿಟ್ಟಿನಲ್ಲಿ ಉದ್ಯಾವನದೊಳಗಿನ ಬಾವಿ, ಕೊಳಗಳ ಹೂಳೆತ್ತುವ ಮೂಲಕ ಪರಿಸರಕ್ಕೆ ಜೀವಕಳೆ ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

Advertisement

ಉದ್ಯಾನವನದಲ್ಲಿರುವ ಕರಗದ ಕುಂಟೆ, ತಾವರೆ ಕೊಳ ಹಾಗೂ ಏಳು ಬಾವಿಗಳಲ್ಲಿ ಹೂಳೆತ್ತಿ, ಅಲ್ಲಿ ಮಳೆ ನೀರು ಸಂಗ್ರಹ ಮಾಡಿ ಆ ನೀರನ್ನೇ ಗಿಡ-ಮರಗಳಿಗೆ ಉಪಯೋಗಿಸುವುದು. ಜತೆಗೆ ಉದ್ಯಾನದ ಇಳಿಜಾರು ಪ್ರದೇಶಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಸಂರಕ್ಷಣೆ ಮಾಡುವ ಮೂಲಕ ಉದ್ಯಾನವನದ ಸಂಪೂರ್ಣ ವಾತಾವರಣ ತಂಪಾಗಿಸುವುದು ಇದರ ಉದ್ದೇಶವಾಗಿದೆ.

ಉದ್ಯಾನವನದ ಸುತ್ತ¤ಲ ಇಳಿಜಾರು ಪ್ರದೇಶದಲ್ಲಿ 65 ಮಳೆ ನೀರು ಇಂಗು ಗುಂಡಿಗಳನ್ನು ನಿರ್ಮಿಸಲು ಇಲಾಖೆ ತೀರ್ಮಾಸಿದ್ದು, ಇದಕ್ಕಾಗಿ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಈಗಾಗಲೇ 14 ಅಡಿ ಆಳದ 40 ಇಂಗು ಗುಂಡಿಗಳನ್ನು ನಿರ್ಮಿಸಿದ್ದು, ಮಾಸಾಂತ್ಯದ ವೇಳೆಗೆ 25 ಗುಂಡಿಗಳ ನಿರ್ಮಾಣ ಪೂರ್ಣಗೊಳ್ಳಲಿದೆ.

ಮಳೆಗಾಲದ ವೇಳೆ ಉದ್ಯಾನವನದಲ್ಲಿ ಸುರಿದ ನೀರು ಸುಮ್ಮನೆ ಬೇರೆಡೆಗೆ ಹರಿದು ಹೋಗುತ್ತಿದ್ದು ಇದನ್ನು ಕೂಡ ಉದ್ಯಾನದ ಒಳಗೇ ಹಿಡಿದಿಡುವ ಪ್ರಯತ್ನ ನಡೆದಿದೆ. ಮಳೆ ಬಂದ ವೇಳೆ ಸುರಿದ ನೀರು ಉದ್ಯಾನವನದ ಕಲ್ಯಾಣಿ, ಬಾವಿ, ಕೊಳದಲ್ಲಿ ಸಂಗ್ರಹವಾದರೆ ಆ ನೀರು ಬಳಕೆ ಮಾಡಿಕೊಳ್ಳಬಹುದು.

ಜತೆಗೆ ಇಂಗು ಗುಂಡಿಗಳಲ್ಲಿ ನೀರು ಸಂಗ್ರಹವಾದರೆ ಅಲ್ಲಿರುವ ಗಿಡ, ಮರಗಳ ಜತೆಗೆ ವಾತಾವರಣ ಕೂಡ ಹಸಿರಾಗಿರಲಿದೆ. ಆ ನಿಟ್ಟಿನಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ಕೆಲಸ ಸಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ್‌ ಮುರುಗೋಡು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಕೊಳಗಳಿಗೆ ಮರುಜೀವ: ಉದ್ಯಾನವನದಲ್ಲಿ ಈಗಾಗಲೇ ಕರಗದ ಕುಂಟೆ, ತಾವರೆ ಕೊಳ (ಬಾಲಭವನದ ಸಮೀಪ) ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಕೊಳಗಳಿದ್ದು ಅವುಗಳಿಗೆ ಜೀವ ಕಳೆ ನೀಡುವ ಕೆಲಸ ಆರಂಭವಾಗಿದೆ.

ಖಾಸಗಿ ಸಂಸ್ಥೆಯವರು ಈ ಕೊಳಗಳ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದು, ಸದ್ಯದಲ್ಲೇ ಈ ಕೊಳಗಳಿಗೆ ಜೀವಕಳೆ ಬರಲಿದೆ. ಇದರ ಜತೆಗೆ ನೀರಿನ ಇಳಿಜಾರು ಕಾಲುವೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದ್ದು, ನೀರಿನ ಸ್ತರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾವಿ ನೀರು ಬಳಕೆಗೆ ಆದ್ಯತೆ: ಕಬ್ಬನ್‌ ಪಾಕ್‌ನಲ್ಲಿ ಸುಮಾರು 7 ಬಾವಿಗಳಿದ್ದು, ಕಳೆದ ವರ್ಷ ಈ ಬಾವಿಗಳ ಹೂಳು ತೆಗೆಯಲಾಗಿದೆ. ಅವುಗಳಲ್ಲಿ ನೀರಿದ್ದು, ಬಾವಿ ಬಳಕೆ ಮಾಡಿಕೊಳ್ಳಲಾಗುವುದು. ಜತೆಗೆ ಈಗಾಗಲೇ ಇರುವ 3 ಬೋರ್‌ವೆಲ್‌ಗ‌ಳಲ್ಲೂ ನೀರಿದ್ದು, ಇವುಗಳ ನೀರಿನ ಸ್ತರವನ್ನು ಮತ್ತಷ್ಟು ಹೆಚ್ಚುವ ಕೆಲಸ ಕೂಡ ನಡೆದಿದೆ.

ಗಿಡ ಮರಗಳಿಗೆ ನೀರುಣಿಸಲೆಂದೇ ತೋಟಗಾರಿಕೆ ಇಲಾಖೆ ಪ್ರತಿ ವರ್ಷ 10 ಲಕ್ಷಕ್ಕೂ ಅಧಿಕ ಹಣ ವೆಚ್ಚ ಮಾಡುತ್ತಿದ್ದು, ನೀರಿನ ಕರ ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಗಿಡ, ಮರಗಳಿಗೆ ನೀರುಣಿಸಲು ತೋಟಗಾರಿಕೆ ಇಲಾಖೆ ಜಲಮಂಡಳಿಯ ಎಸ್‌ಟಿಪಿ ಘಟಕ (ಕೊಳಚೆ ನೀರನ್ನು ಸಂಸ್ಕರಿಸಿ ಬಳಕೆಗೆ ನೀಡುವುದು)ಗಳನ್ನು ಹೆಚ್ಚು ಅವಲಂಬಿಸಲಾಗಿದೆ. ಬೇಸಿಗೆ ಕಾಲದಲ್ಲಿ ನೀರಿನ ಬಳಕೆಗಾಗಿಯೇ ತೋಟಗಾರಿಕೆ ಇಲಾಖೆ, ಪ್ರತಿ ವರ್ಷ ಜಲಮಂಡಳಿಗೆ ಸುಮಾರು 6 ಲಕ್ಷ ರೂ. ಪಾವತಿಸುತ್ತಿದೆ.

ಬೇಸಿಗೆ ಹೊರತುಪಡಿಸಿ ಬೇರೆ ಅವಧಿಯಲ್ಲಿ ಗಿಡ, ಮರಗಳಿಗೆ ನೀರುಣಿಸಲು ಇಲಾಖೆ, ಜಲಮಂಡಳಿಗೆ 3ರಿಂದ 4 ಲಕ್ಷ ರೂ. ಪಾವತಿಸುತ್ತಿದೆ. ಹೀಗಾಗಿ, ಕಲ್ಯಾಣಿ, ಕೊಳ ಹಾಗೂ ಬಾವಿಗಳಲ್ಲಿನ ಹೂಳು ತೆಗೆದು ಅಲ್ಲಿ ಮಳೆ ನೀರು ಸಂಗ್ರಹಿಸಿದರೆ, ಇಂಗು ಗುಂಡಿಗಳಿಂದ ಅಂತರ್ಜಲ ಸಂರಕ್ಷಣೆಯಾದರೆ ನೀರಿಗಾಗಿ ಮಾಡುತ್ತಿರುವ ವೆಚ್ಚ ತಗ್ಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಕಬ್ಬನ್‌ ಪಾರ್ಕ್‌ನಲ್ಲಿರುವ ನೀರಿನ ಮೂಲಗಳನ್ನು ಹೆಚ್ಚಿಸುವ ಕೆಲಸ ನಡೆದಿದೆ. ಕಲ್ಯಾಣಿಗಳ ಹೂಳೆತ್ತುವ ಜತೆಗೆ ಇಳಿಜಾರು ಪ್ರದೇಶದಲ್ಲಿ ಮಳೆನೀರು ಇಂಗು ಗುಂಡಿಗಳ ನಿರ್ಮಾಣಕ್ಕೆ ಸಲಹೆ ನೀಡಲಾಗಿದೆ. ಅದರಂತೆ ತೋಟಗಾರಿಕೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ.
-ಡಾ.ಎ.ಎನ್‌.ಯಲ್ಲಪ್ಪರೆಡ್ಡಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next