Advertisement

ಕನ್ನಡ ಉಳಿಸಲು ಸಿ.ಟಿ.ರವಿ ಹೊಸ ಐಡಿಯಾ!

11:38 AM Oct 24, 2019 | Team Udayavani |

ಧಾರವಾಡ: ಕನ್ನಡ, ಇತಿಹಾಸ, ಸಮಾಜ ವಿಜ್ಞಾನ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಇರಿಸಿ, ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳನ್ನು ಆಂಗ್ಲ ಮಾಧ್ಯಮಗೊಳಿಸಿದರೆ ಕನ್ನಡ ಉಳಿಸುವ ಕೆಲಸ ಆಗಲಿದ್ದು, ಈ ಕುರಿತಂತೆ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ರೀತಿ ಎರಡೆರಡು ಮಾಧ್ಯಮ ಜಾರಿ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರಿಂದ ಸಲಹೆ ಬಂದಿದೆ. ಈ ರೀತಿ ವಿಭಾಗಿಸಿ ಮಾಧ್ಯಮ ಮಾಡಿದರೆ ಕನ್ನಡ ಉಳಿಯಲು ಸಾಧ್ಯವಿದ್ದು, ಇದರೊಂದಿಗೆ ಮಕ್ಕಳಿಗೂ ಕೂಡ ಇಂಗ್ಲಿಷ್‌ ಕಲಿಯಲು ಸುಲಭ ಆಗಲಿದೆ. ಇದರಿಂದ ನಮ್ಮ ಸಂಸ್ಕೃತಿಯ ಕೀಲಿ ಕೈ ಆಗಿರುವ ಭಾಷೆ ಮತ್ತು ಕನ್ನಡ ಶಾಲೆಗಳೂ ಸಹ ಉಳಿಯಲು ಸಾಧ್ಯವಾಗಲಿದೆ ಎಂದರು.

ರಂಗಮಂದಿರಗಳಿಗೆ ಅನುದಾನ
ರಾಜ್ಯದಲ್ಲಿ ಈಗ 16 ರಂಗ ಮಂದಿರಗಳಿದ್ದು, 14 ರಂಗ ಮಂದಿರ ನಿರ್ಮಾಣ ಆಗಬೇಕಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು. ರಂಗಾಯಣಗಳ ನಿರ್ದೇಶಕರ ಆಯ್ಕೆ ಮಾಡಲು ಮೊದಲು ರಂಗ ಸಮಾಜದ ಸದಸ್ಯರ ನೇಮಕ ಆಗಬೇಕಿದ್ದು, ಗುರುವಾರ ರಂಗ ಸಮಾಜದ ಸದಸ್ಯರ ನೇಮಕಾತಿಗಾಗಿ ಸಿಎಂ ಅವರಿಗೆ ಪಟ್ಟಿ ಕಳುಹಿಸಿ ಕೊಡಲಾಗುವುದು ಎಂದರು.

ವರ್ಷಾಂತ್ಯಕ್ಕೆ ಸುಸ್ಥಿರ ಪ್ರವಾಸೋದ್ಯಮ ನೀತಿ
ನವೆಂಬರ್‌ ಅಂತ್ಯದೊಳಗೆ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮುಗಿಸಲಿದ್ದು, ಈ ಅಧ್ಯಯನ ಪ್ರವಾಸದ ಆಧಾರದ ಮೇಲೆ ರಾಜ್ಯಕ್ಕೆ ಸುಸ್ಥಿರವಾದ ಪ್ರವಾಸೋದ್ಯಮ ನೀತಿ ರೂಪಿಸಲಾಗುವುದು. ನಮ್ಮಲ್ಲಿ ಪ್ರದೇಶಕ್ಕೊಂದು ಆಹಾರ, ಭಾಷೆ, ಸಂಸ್ಕೃತಿ ಪದ್ಧತಿ ಇದ್ದು, ಇವೆಲ್ಲದರ ಮೇಲೆ ಪ್ರವಾಸಿಗರನ್ನು ಆಕರ್ಷಣೆ ಮಾಡಬಹುದಾಗಿದೆ. ಇದು ಕೂಡ ಪ್ರವಾಸೋದ್ಯಮ ನೀತಿ ರೂಪಿಸಲು ಸಹಕಾರಿ ಆಗಲಿದೆ. ಡಿಸೆಂಬರ್‌ನಲ್ಲಿ ಪ್ರವಾಸೋದ್ಯಮ ನೀತಿಗೆ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಟ್ರಸ್ಟ್‌ಗಳು ನೀಡುವ ರಾಷ್ಟ್ರಮಟ್ಟದ ಪ್ರಶಸ್ತಿಗಳ ನಗದು ಪುರಸ್ಕಾರ ಇಳಿಕೆ ಮಾಡಿರುವ ಬಗ್ಗೆ ಪುನರ್‌ ಪರಿಶೀಲಿಸಲಾಗುವುದು. ಹಣದ ಮೇಲೆ ಪ್ರಶಸ್ತಿಯ ಮೌಲ್ಯವನ್ನು ಅಳೆಯಲಾಗದು. ಹೀಗಾಗಿ ಇವೆಲ್ಲದರ ಮಧ್ಯದ ದಾರಿ ಹುಡುಕಬೇಕಿದ್ದು, ಆದಷ್ಟು ಬೇಗ ಈ ಬಗ್ಗೆ ತೀರ್ಮಾನಿಸಲಾಗುವುದು.
– ಸಿ.ಟಿ. ರವಿ, ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next