Advertisement

ಕಾಂಗ್ರೆಸ್ ನಲ್ಲೇ ಸಿದ್ದರಾಮಯ್ಯ ವಿರುದ್ಧ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ: ಸಿ.ಟಿ. ರವಿ

06:26 PM Oct 09, 2024 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವಿಶ್ವಾಸ ಇಲ್ಲದ ಕಾರಣಕ್ಕೆ ಅವರನ್ನ ಕೆಳಗಿಳಿಸಲು ಕಾಂಗ್ರೆಸ್‌ನಲ್ಲೇ ತೆರೆಮರೆಯ ಚಟುವಟಿಕೆ ಜೋರಾಗಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ತಿಳಿಸಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಇರುವಾಗಲೇ ಅವರನ್ನ ಕೆಳಗಿಸಲು ಕಾಂಗ್ರೆಸ್‌ನಲ್ಲಿ ಬಿರುಸಿನ ತೆರೆಮರೆಯ ಚಟುವಟಿಕೆ ನಡೆಯುತ್ತಿದೆ. ಜನರು ಅವರನ್ನು ಅಧಿಕಾರಕ್ಕೆ ಏರಿಸಿದ್ದಾರೆ. ಅವರನ್ನ ಕೆಳಗಿಳಿಸುವ ಕೆಲಸ ಕಾಂಗ್ರೆಸ್‌ನಲ್ಲೇ ನಡೆಯುತ್ತಿದೆ. ನಾವು ಬಿಜೆಪಿಯವರು ಆ ವಿಷಯದಲ್ಲಿ ಕೈ ಹಾಕಲಿಕ್ಕೆ ಹೋಗುವುದಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ, ಹೆದರುವುದಿಲ್ಲ… ಎಂದು ಹೇಳಿ ದ್ದಾರೆ. ಪ್ರಜಾಪ್ರಭುತ್ವದಲ್ಲಿ ಆ ಮಾತುಗಳು ಸೂಕ್ತ ಅಲ್ಲ. ನಾವು ಜನರಿಗೆ ಹೆದರಬೇಕು. ಏಕೆಂದರೆ ನಮ್ಮನ್ನು ಅಧಿಕಾರಕ್ಕೇರಿಸುವವರು. ಅಧಿಕಾರಕ್ಕೆ ಏರಿಸಿದ ಜನರಿಗೆ ಕೆಳಕ್ಕೆ ಬೀಳಿಸುವುದು ಸಹ ಗೊತ್ತಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವಿಶ್ವಾಸ ಇಲ್ಲದಿರುವ ಕಾರಣಕ್ಕಾಗಿಯೇ ಅವರಿದ್ದಾಗಲೇ ಅವರನ್ನ ಕೆಳಕ್ಕಿಳಸಲು ಬಿಜೆಪಿಯವರಗಿಂತಲೂ ಕಾಂಗ್ರೆಸ್‌ನವರೇ ಟೀ ಪಾರ್ಟಿ, ಬ್ರೇಕ್‌ಫಾಸ್ಟ್ ಪಾರ್ಟಿ, ಡಿನ್ನರ್ ಪಾರ್ಟಿ ಮೂಲಕ ತೆರೆಮರೆಯಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿಯೇ ಬಿಜೆಪಿ ರಾಜ್ಯಾಧ್ಯಕ್ಷರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಆದಷ್ಟು ಬೇಗ ರಾಜೀನಾಮೆ ನೀಡಬಹುದು ಎಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿ ಸಿದರು.ಬಿಜೆಪಿಯವರು ಮುಡಾ, ವಾಲ್ಮೀಕಿ ಮಹರ್ಷಿ ನಿಗಮ, ಅರ್ಕಾವತಿ ಬಡಾವಣೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ, ಸಮೀಕ್ಷೆ ನೆನೆಪಿಗೆ ಬಂದಿದೆ:

Advertisement

ದಾವಣಗೆರೆ: ಮುಡಾ ಹಗರಣದ ಬಗ್ಗೆ ವ್ಯಕ್ತವಾಗುತ್ತಿರುವ ಜನಾಕ್ರೋಶದ ವಿಷಯಾಂತರಕ್ಕಾಗಿ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಜಾತಿ ಗಣತಿ, ಸಮೀಕ್ಷೆ ನೆನೆಪಿಗೆ ಬಂದಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ. ರವಿ ದೂರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಮೀಸಲಾತಿ ಬಗ್ಗೆ ಯೇಪ್ರಾಮಾಣಿಕತೆ ಮತ್ತು ಬದ್ಧತೆ ಇಲ್ಲ. ಜವಾಹರ್ ಲಾಲ್ ನೆಹರು ಅವರು ಪ್ರಧಾನಮಂತ್ರಿ ಆಗಿದ್ದಾಗಲೇ ಮೀಸಲಾತಿ ಅಭಿವೃದ್ಧಿ ವಿರೋಧಿ. ದಕ್ಷತೆಗೆ ಅಡ್ಡಿ ಬರುತ್ತದೆ… ಎಂಬುದಾಗಿ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದರು. ಕಾಂಗ್ರೆಸ್ ಎಂದರೆ ಮೀಸಲಾತಿ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

2017ರಲ್ಲಿ ಸಲ್ಲಿಕೆಯಾಗಿದ್ದ ಎಚ್. ಕಾಂತರಾಜ್ ವರದಿ ನೆನಪಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಈಗ ಜಾತಿ ಗಣತಿ, ಸಮೀಕ್ಷೆ ನೆನೆಪಿಗೆ ಬಂದಿದೆ ಎಂದು ದೂರಿದರು.

ಜಾತಿಗಣತಿಯನ್ನ ನ್ಯಾಯ ಒದಗಿಸಲು ಬಳಕೆ ಮಾಡಿದರೆ ವಿರೋಧ ಇಲ್ಲ. ಆದರೆ, ವೀರಶೈವ ಮತ್ತಿತರೆ ಸಮಾಜ ವನ್ನ ಒಡೆಯುವ ಕೆಲಸಕ್ಕೆ ದುರ್ಬಳಕೆ ಮಾಡಿಕೊಂಡರೆ ವಿರೋಧ ಇದೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು, ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶವನ್ನ ದಿಕ್ಕು ತಪ್ಪಿಸಲು ಮೀಸಲಾತಿ ವಿಚಾರ ಬಳಕೆ ಮಾಡಿಕೊಂಡರೆ ರಾಜ್ಯದ ಜನರು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಬದ್ದ ಸ್ಥಾನ ಮಾನ ನೀಡಿದ್ದೇ ಬಿಜೆಪಿ. ಬಡ್ತಿ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದೇ ಬಿಜೆಪಿ. ನಮ್ಮ ಪ್ರಧಾನಿ ಯವರೇ ಹಿಂದುಳಿದ ವರ್ಗಗಳ ನಾಯಕರು. ರಾಷ್ಟ್ರಕ್ಕಾಗಿ ರಾಜಕಾರಣ ಮಾಡುವವರು ಎಂದು ತಿಳಿಸಿದರು.

ಬಿಜೆಪಿಯವರ ಬಗ್ಗೆ ಎಲ್ಲ ತನಿಖೆ ನಡೆಯಲಿ. ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ನಾಯಕರಾಗಿದ್ದವರು. ಹಾಗಾಗಿ ಆರ್‌ಸಿಬಿ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎಂಟು ಗಂಟೆಯಲ್ಲಿ ಬಂಧಿಸಲಾಗಿದೆ. ಈಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧವೂ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಮುನಿರತ್ನ ಅವರನ್ನ ಬಂಧಿಸಲು ಎಷ್ಟು ಆತುರ ತೋರಿದರೋ ಅದೇ ರೀತಿ ವಿನಯ್ ಕುಲಕರ್ಣಿ, ಚೆನ್ನಾರೆಡ್ಡಿ ವಿರುದ್ದವೂ ಆತ್ಮಸಾಕ್ಷಿಯಂತೆ ಕ್ರಮ ತೆಗೆದು ಕೊಳ್ಳುವರಾ ಎಂಬುದನ್ನು ಕಾದು ನೋಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: Anandapura: ವರುಣಾರ್ಭಟ: ಕೊಚ್ಚಿ ಹೋದ ಸೇತುವೆ: ಸಂಪರ್ಕ ಕಳೆದುಕೊಂಡ ಗ್ರಾಮಸ್ಥರು

Advertisement

Udayavani is now on Telegram. Click here to join our channel and stay updated with the latest news.

Next