ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಯಾರದ್ದೋ ಮದುವೆಯಲ್ಲಿ ಉಂಡವ ನೇ ಜಾಣ ಎಂಬಂತೆ ವರ್ತಿಸುತ್ತಿದೆ ಎಂದು ಆನೆ ದಾಳಿಯಿಂದ ಕೇರಳದಲ್ಲಿ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರ್ಕಾರ ಹಣ ನೀಡಿದ್ದಕ್ಕೆ ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ತೆರಿಗೆ ನನ್ನ ಹಕ್ಕು ಎಂದು ಎದೆ ತಟ್ಟಿ ಕೊಂಡು ನಾಟಕ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯಕ್ಕೆ ಸಂಬಂಧವಿಲ್ಲದ ಪ್ರಕರಣದಲ್ಲಿ 15 ಲಕ್ಷ ರೂ. ವ್ಯಯ ಮಾಡುತ್ತಿದೆ ಏಕೆ ಎಂದು ಪ್ರಶ್ನಿಸಿದರು.
ಘಟನೆ ನಡೆದಿರುವುದು ಕೇರಳದಲ್ಲಿ ಪರಿಹಾರ ನೀಡಬೇಕಿರುವುದು ಕೇರಳ ಸರ್ಕಾರ ಎಂದ ಅವರು ಆನೆ ಕರ್ನಾಟಕದ್ದು, ಕೇರಳದ್ದು, ತಮಿಳುನಾಡಿನದ್ದು ಎಂದು ಸೀಲ್ ಹಾಕಿದ್ದಾರ ಎಂದ ಅವರು, ಹೈಕಮಾಂಡ್ ಮೆಚ್ಚಿಸಲು ಮತ್ತು ರಾಜಕೀಯ ಹಿತಾಸಕ್ತಿಗೆ ಕರ್ನಾಟಕ ರಾಜ್ಯದ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರು ದೆಹಲಿಗೆ ಹೋಗಿ ನನ್ನ ತೆರಿಗೆ ನನ್ನ ಹಕ್ಕು ಎನ್ನುತ್ತಾರೆ. ನಿಮ್ಮ ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣವನ್ನು ಕೇರಳಕ್ಕೆ ಕೊಡಲು ನಾಚಿಕೆಯಾಗಲ್ವಾ ಎಂದ ಅವರು, ಕೇರಳದಲ್ಲಿ ನಿಮ್ಮದೆ ಮೈತ್ರಿಕೂಟದ ಸರ್ಕಾರವಿದೆ. ಪರಿಹಾರ ಕೊಡಿಸಲು ಯೋಗ್ಯತೆ ಇಲ್ವಾ. ದೆಹಲಿಯಲ್ಲಿ ಎಲ್ಲಾ ಒಂದು ಅಂತಾರೆ, ಪರಿಹಾರ ಕೊಡಿಸಲು ರಾಹುಲ್‌ಗಾಂಧಿಯವರಿಗೆ ಆಗೋದಿಲ್ವಾ, ಕರ್ನಾಟಕದಲ್ಲಿ ನಿಮ್ಮ ವೇಣುಗೋಪಾಲ್ ಅವರದ್ದು ಏನು ನಡೆಯೋದಿಲ್ವಾ ಎಂದರು.
ಕಾಂಗ್ರೆಸ್ ಅಧಿನಾಯಕಿ ಹಿತಾಸಕ್ತಿಗೆ ರಾಜ್ಯದ ಖಜಾನೆ ಲೂಟಿ ಮಾಡುವ ಬದಲು ಕೆಪಿಸಿಸಿಗೆ ಬರ ಬಂದಿಲ್ಲ. ಕೆಪಿಸಿಸಿಯಿಂದ 15 ಲಕ್ಷ ಇಲ್ಲ ಅಂದರೇ 50ಲಕ್ಷ ಕೊಡಿ ಯಾರು ಬೇಡ ಎಂದರು ಎಂದ ಅವರು, ಕೇರಳ ಕಾಂಗ್ರೆಸ್ ಸಂಸದನ ತಾಳಕ್ಕೆ ರಾಜ್ಯ ಕಾಂಗ್ರೆಸ್ ಕುಣಿಯುತ್ತಿದೆ. ತನ್ನ ಧಣಿಗಳ ಮನ ಮೆಚ್ಚಿಸಲು ಈ ರೀತಿ ಮಾಡುತ್ತಿದೆ. ನಕಲಿ ಗಾಂಧಿಗಳ ಹಿತರಕ್ಷಣೆಗೆ ಕನ್ನಡಿಗರ ಹಿತಾಸಕ್ತಿ ಬಲಿ ನೀಡಬೇಕೇ ಎಂದು ಹೇಳಿದರು.
ತುಘಲಕ್ ದರ್ಬಾರ್ ಅನ್ನೋದನ್ನ ಓದಿದ್ವಿ, ಕೇಳಿದ್ವಿ, ಸಿದ್ದರಾಮಯ್ಯನವರ ಆಡಳಿತದಲ್ಲಿ ನೋಡುತ್ತಿದ್ದೇವೆ. ಕನ್ನಡಿಗರ ಪಾಲಿಗೆ ತುಘಲಕ್ ದರ್ಬಾರ್ ಅನುಭವಿಸಬೇಕಾದ ದುಸ್ಥಿತಿ ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: Shimoga: ಪತ್ನಿ ಜೊತೆ ಬದಿ ಮನೆಯ ಯುವಕನ ಮಾತು… ಕೋಪಗೊಂಡ ಪತಿಯಿಂದ ಮಾರಣಾಂತಿಕ ಹಲ್ಲೆ