ನವದೆಹಲಿ : ‘ಯಡಿಯೂರಪ್ಪ ಅವಧಿಯಲ್ಲಿ ಭಾವನಾತ್ಮಕ ವಿಚಾರಗಳಲ್ಲಿ ರಾಜಕೀಯ ಮಾಡಿಲ್ಲ’ಎಂಬ ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿರಾಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್ ಎಲ್ಲರದೂ ಬಿಜೆಪಿ ಸರ್ಕಾರ. ಎಲ್ಲ ವೇಳೆ ನಾನು ಶಾಸಕನಾಗಿ ಆಡಳಿತ ನೋಡಿದ್ದೇನೆ. ವಿಜಯೇಂದ್ರ ಯಾವ ಹಿನ್ನಲೆಯಲ್ಲಿ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ ಎಂದರು.
ವಿಜಯೇಂದ್ರ ಅವರಿಗೆ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ರೀತಿ ಬೇರೆ ಬೇರೆ ವ್ಯಾಖ್ಯಾನ ಇರುತ್ತವೆ. ಅವರಿಗೆ ಎರಡು ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ ಇದೆ. ನಿನ್ನೆ ಕೂಡ ಅವರ ಜತೆ ಮಾತಾಡಿದ್ದೇನೆ ಅವರು ಉಪಾಧ್ಯಕ್ಷರೂ ಆಗಿದ್ದಾರೆ ಎಂದರು.
ಜನಿವಾರವೋ,ಉಡುದಾರವೋ ಎಂದು ನೋಡುವುದು ತಪ್ಪು
Related Articles
ದೇವನೂರು ಮಹಾದೇವ ಪಠ್ಯ ಬೇಕೆ ಬೇಕು ಎಂಬ ಒತ್ತಾಯವಿಲ್ಲ. ಬೇಡ ಎನ್ನುವ ಅವರ ಅಭಿಪ್ರಾಯವನ್ನು ಸಮಿತಿ ಗೌರವಿಸವೇಕು. ಪೂರ್ವಾಗ್ರಹ ಪೀಡಿತ ಮನಸ್ಸುಗಳು ಹೀಗೆ ಮಾಡುತ್ತಿವೆ. ಕಂಟೆಂಟ್ ಮೇಲೆ ಕಾಮೆಂಟ್ ಮಾಡಬೇಕು. ಪಠ್ಯ ಹೊರ ಬರುವುದಕ್ಕೆ ಮುಂಚೆ ಜನಿವಾರವೋ,ಉಡುದಾರವೋ, ಶಿವದಾರವೋ ಎಂದು ನೋಡುವುದು ತಪ್ಪು ಎಂದು ಕಿಡಿ ಕಾರಿದರು.
ಜಾತಿಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಮೊಘಲರನ್ನು ವೈಭವಿಕರಣ ಮಾಡುವ ಕೆಲಸ ಮಾಡಿದರು. ಶಿವಾಜಿಯ ವಿಷಯನ್ನು ಹೆಚ್ಚು ಹೇಳಲಿಲ್ಲ. ಭಾರತೀಯತೆಯನ್ನು ಎತ್ತಿಹಿಡಿಯುವ ಕೆಲಸ ಮಾಡಿರಲಿಲ್ಲ. 70 ವರ್ಷದ ಆಡಳಿತಕ್ಕೆ ಪೆಟ್ಟು ಬಿದಿದ್ದೆ, ಹೀಗಾಗಿ ಕೆಲವರು ವಿಲ ವಿಲ ಎಂದು ಒದ್ದಾಡುತ್ತಿದ್ದಾರೆ. ಕೆಲವರು ಮೊಘಲ್ ಆಸ್ಥಾನದಲ್ಲಿದ್ದೇವೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ. ಮೆಕಾಲೆ ಗುಲಾಮಗಿರಿಯಿಂದ ಅವರು ಹೊರ ಬರಬೇಕಿದೆ ಎಂದರು.
ಶ್ರೀರಂಗಪಟ್ಟಣ ಮಸೀದಿಯ ಅಧ್ಯಯನ ನಡೆಸಲಿ
ಮಳಲಿ ಮಸೀದಿ ವಿಚಾರಕ್ಕೆ ಸಾವಿರಾರು ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿರುವುದು ವಾಸ್ತವ ಸತ್ಯ. ನಾನು ಈಗಲೂ ಸವಾಲು ಹಾಕುತ್ತೇನೆ, ಶ್ರೀರಂಗಪಟ್ಟಣ ಜಾಮೀಯ ಮಸೀದಿಯ ಬಗ್ಗೆ ಅಧ್ಯಯನ ನಡೆಸಲಿ. ಪುರಾತತ್ವ ಇಲಾಖೆಯಿಂದ ಅಧ್ಯಯನ ಮಾಡಿಸಲಿ.ಟಿಪ್ಪು ಸುಲ್ತಾನ್ ನಿಜ ಬಣ್ಣ ಬಯಲಾಗುತ್ತಿದೆ. ಈ ನೆಲದ ಕಾನೂನು ಅಂತಿಮ. ಆದರೆ ತಾಂಬೂಲ ಪ್ರಶ್ನೆ ನಂಬಿಕೆ ಇರುವವರು ಕೇಳಿದ್ದಾರೆ. ಬೇರೆಯವರ ನಂಬಿಕೆ ನಾವು ಹೇಗೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಕಾನೂನು ಅಡಿಯಲ್ಲಿ ವಿವಾದ ಇತ್ಯರ್ಥವಾಗಲಿದೆ ಎಂದರು.
ನಂಬಿಕೆ ಇರುವವರು ದೇವರ ಮೊರೆ ಹೋಗುತ್ತಾರೆ. ಅಧಿಕಾರಕ್ಕಾಗಿ ಹೋಮ ಮಾಡುತ್ತಾರೆ. ಅವರ ನಂಬಿಕೆಯನ್ನು ಪ್ರಶ್ನೆ ಮಾಡುವುದಕ್ಕೆ ನಾವು ಯಾರು ಎಂದು ಪರೋಕ್ಷವಾಗಿ ಎಚ್ ಡಿ ಕೆ ಹೇಳಿಕೆಗೆ ಟಾಂಗ್ ನೀಡಿ, ನಾವು ಓಟಿಗಾಗಿ ರಾಜಕೀಯ ಮಾಡಿಲ್ಲ. ನಾಲ್ಕು ತಲೆ ಮಾರು ಇದೇ ವಿಚಾರಗಳ ಮೇಲೆ ಹೋರಾಟ ಮಾಡಿದ್ದೇವೆ ಎಂದರು.