ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ಜಿಲ್ಲೆಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಸಿ.ಟಿ. ರವಿ ಅವರನ್ನು ಪೊಲೀಸ್ ಜೀಪ್ನಲ್ಲಿ ಕರೆದುಕೊಂಡು ಹೋಗುವಾಗ ಹಿರೇಬಾಗೇವಾಡಿ ಗ್ರಾಮದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರವಿ ಅವರಿದ್ದ ವಾಹನದ ಮೇಲೆ ದಾಳಿ ನಡೆಸಲು ಮುಂದಾದಾಗ ಕೂಡಲೇ ಪೊಲೀಸರು ತಡೆಹಿಡಿದರು. ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ರಾಣಿ ಚನ್ನಮ್ಮ ವೃತ್ತದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಸಿ.ಟಿ ರವಿ ಅವರ ಭಾವಚಿತ್ರ ಬೆಂಕಿ ಇಟ್ಟು ಪ್ರತಿಭಟಿಸಿರು. ವಿಧಾನ ಪರಿಷತ್ ಸ್ಥಾನದಿಂದ ರವಿ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಹೆಬ್ಬಾಳಕರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಸಿ.ಟಿ. ರವಿ ವಿರುದ್ಧ ಸುವರ್ಣ ವಿಧಾನಸೌಧ ಒಳಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರವಿ ನಡೆದುಕೊಂಡು ಹೋಗುವಾಗ ಕೆಲ ಕಾರ್ಯಕರ್ತರು ದಾಳಿ ಮಾಡಲು ಯತ್ನಿಸಿದರು. ಆಗ ಮಾರ್ಷಲ್ಗಳು ಹಾಗೂ ಪೊಲೀಸರು ತಡೆದು ರವಿ ಅವರನ್ನು ಸುರಕ್ಷಿತವಾಗಿ ಕಳುಹಿಸಿದರು. ಜತೆಗೆ ರವಿ ಅವರಿದ್ದ ಕಾರಿನ ಮೇಲೂ ಹೆಬ್ಬಾಳಕರ ಬೆಂಬಲಿಗರು ದಾಳಿಗೆ ಯತ್ನಿಸಿದರು.