Advertisement

Mysore; ಚಾಮುಂಡಿ ದೇವಿ ಮುಂದೆ ಅಣೆ ಮಾಡಲು ಸಿದ್ದರಾಮಯ್ಯಗೆ ಸಿ.ಟಿ ರವಿ ಆಹ್ವಾನ

02:49 PM Mar 01, 2024 | Team Udayavani |

ಮೈಸೂರು: ಕುಣಿಯಲಾರದವಳು ನೆಲ ಡೊಂಕು ಎಂನ್ನುವಂತೆ ಎಂಬ ಸ್ಥಿತಿ ರಾಜ್ಯ ಸರಕಾರದ್ದು. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಬೆರಳು ತೋರುತ್ತಿದೆ. ಜನರು ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯಕ್ಕೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಸಿಎಂ ಆರೋಪಿಸಿದ್ದಾರೆ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿ ಕೇಂದ್ರ ಕೊಟ್ಟಿದ್ದೆಂದು ತಾಯಿ ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡುತ್ತೇನೆ. ನೀವು ಬನ್ನಿ ಅದು ನಿಮ್ಮದೆ ಅಕ್ಕಿ ಎಂದು ಪ್ರಮಾಣ ಮಾಡಿ. ನೀವೇ ಪ್ರಮಾಣದ ದಿನ ನಿಗದಿ ಮಾಡಿ. ನೀವು ಕರೆದ ದಿನ ನಾನು ಚಾಮುಂಡಿ ಬೆಟ್ಟಕ್ಕೆ ಬರುತ್ತೇನೆ ಎಂದು ಸವಾಲೆಸೆದರು.

ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 4 ಲಕ್ಷ 91 ಸಾವಿರ ಕೋಟಿ ಕೊಟ್ಟಿದೆ. 10 ವರ್ಷದಲ್ಲಿ ಮನಮೋಹನ್ ಸಿಂಗ್ ಸರಕಾರ ತೆರಿಗೆ, ವಂತಿಗೆ ಮತ್ತು ಅನುದಾನದ ಹೆಸರಿನಲ್ಲಿ 1 ಲಕ್ಷ 92 ಸಾವಿರ ಕೋಟಿ ಕೊಟ್ಟಿದೆ. ಇದು ಸತ್ಯ ಎಂದು ನಮ್ಮ ಎಲ್ಲಾ ಸಂಸದರನ್ನು ಕರೆದುಕೊಂಡು ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡುತ್ತೇವೆ. ಸಿಎಂ ಕೂಡ ತನ್ನ ಸಚಿವ ಸಂಪುಟದ ಜೊತೆ ಬಂದು ತಾವು ಹೇಳುತ್ತಿರುವುದು ಸತ್ಯ ಎಂದು ಪ್ರಮಾಣ ಮಾಡಲಿ ಎಂದರು.

ಕಾಂಗ್ರೆಸ್ ಕೃಪಾಪೋಷಿತ ಮಂಡಳಿ ನೀಡಿರುವ ಜಾತಿ ಗಣತಿ ವರದಿಯಿದು. ಜಾತಿಗಳ ನಡುವೆ ಎತ್ತಿಕಟ್ಟಲು ಈ ವರದಿ ಸಿದ್ಧ ಮಾಡಿಸಲಾಗಿದೆ. ಹಿಂದೂ ಸಮಾಜವನ್ನು ಜಾತಿ ಜಾತಿ ಹೆಸರಿನಲ್ಲಿ ಹೊಡೆಯಲು ಈ ತಂತ್ರ. ಹಿಂದೂ ಎಂಬ ಭಾವದಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವಾಗಿ ಈ ವರದಿಯಿದೆ. ಕಾಂಗ್ರೆಸ್ ನ ಟೂಲ್ ಕಿಟ್ ನ ಭಾಗವಾಗಿ ಈ ವರದಿ ಇದೆ ಎಂದು ಕಿಡಿಕಾರಿದರು.

ಪಾಕಿಸ್ತಾನ್ ಪರ ಘೋಷಣೆ ವಿಚಾರಕ್ಕೆ ಮಾತನಾಡಿ, ನನ್ನ ಮಾಹಿತಿ ಪ್ರಕಾರ ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ಸತ್ಯ ಎಂಬುದಿದೆ. ಸರಕಾರ ತಕ್ಷಣ ಈ ವರದಿ ಬಹಿರಂಗ ಪಡಿಸಬೇಕು. ನಾಲ್ವರನ್ನು ಪೊಲೀಸರು ವಿಚಾರಣೆ ಮಾಡ್ತಿದ್ದಾರೋ ಅಥವಾ ಬಿರಿಯಾನಿ ತಿನ್ನಿಸುತ್ತಿದ್ದಾರೋ? ಮುಸ್ಲಿಂರನ್ನು ಬ್ರದರ್ಸ್ ಅಂತಾ ಡಿಕೆಶಿಯೆ ಹೇಳಿದ್ದಾರೆ.  ಪಾಕಿಸ್ತಾನ್ ಜಿಂದಾಬಾದ್ ಎಂದವರಿಗೆ ಬಿರಿಯಾನಿ ಕೊಟ್ಟರೂ ಅಚ್ಚರಿ ಬೇಡ ಎಂದರು.

Advertisement

ಕನಕಪುರ ಟ್ಯಾಕ್ಸ್: 40% ಸರಕಾರ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಬೆಂಗಳೂರಿನಲ್ಲಿ ಕನಕಪುರ ಟ್ಯಾಕ್ಸ್ ಕೊಡದೆ ಯಾವ ಫೈಲ್ ಪಾಸ್ ಆಗುತ್ತಿಲ್ಲ. ವರ್ಗಾವಣೆಗೆ ವೈಎಸ್ ಟಿ ಫಿಕ್ಸ್ ಆಗಿದೆ. ಕಲೆಕ್ಷನ್ ಟಾಸ್ಕ್ ಅನ್ನು ತಮ್ಮ ಬೆಂಬಲಿಗರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.

ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಟಿಕೆಟ್ ವಿಚಾರದಲ್ಲಿ ಶೋಭಾ ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೆಯುತ್ತಿದೆ ಎಂಬ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಬಾಸ್ ಇಸ್ ಆಲ್ವೇಸ್ ರೈಟ್. ಬಾಸ್ ವಿರುದ್ದ ಯಾವಾತ್ತಾದರೂ ಮಾತಾಡಲು ಯಾರಿಗಾದರೂ ಸಾಧ್ಯವೇ? ನಾನು ಯಾವತ್ತೂ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಿಲ್ಲ. ಹೀಗಾಗಿ ಅಲ್ಲಿ ನಡೆಯುತ್ತಿರುವ ವಿದ್ಯಮಾನ ನನಗೆ ಸಂಬಂಧಿದ್ದೆಂದು ಹೇಗೆ ಹೇಳುತ್ತೀರಾ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next