Advertisement

ರಾಜ್ಯದಲ್ಲಿ ಬೇರೂರಿ ದೇಶ ಸುತ್ತುವೆ; ಪಕ್ಷ ಕಟ್ಟುವೆ: ರವಿ

04:41 PM Sep 28, 2020 | sudhir |

– ಪಕ್ಷದ ಈ ನಿರ್ಧಾರ ನಿಮಗೆ ಅಚ್ಚರಿ ತಂದಿದೆಯಾ ?
ನಾನೇನೂ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಷ್ಟ್ರೀಯ ತಂಡಕ್ಕೆ ಬರುವ ಬಗ್ಗೆ ಯೋಚನೆ ಮಾಡಿ ಹೇಳು ಎಂದಿದ್ದರು. ನಾನು ಆಯಿತು ಅಂತ ಹೇಳಿದೆ. ಇದು ಅನಂತ ಕುಮಾರ್‌ ಕೆಲಸ ಮಾಡಿದ ಹುದ್ದೆ. ನಾವು ರಾಜಕೀಯವಾಗಿ ಅವರ ಮಾರ್ಗದರ್ಶನದಿಂದ ಬೆಳೆದವರು. ಹೀಗಾಗಿ ಇದೊಂದು ಸೌಭಾಗ್ಯ .

Advertisement

– ನೀವು ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಿದ್ದೀರಿ, ರಾಷ್ಟ್ರ ರಾಜಕಾರಣಕ್ಕೆ ಹೇಗೆ ತೆರೆದುಕೊಳ್ಳುತ್ತೀರಿ?
ನೋಡಿ, ರಾಷ್ಟ್ರದೊಳಗೆ ರಾಜ್ಯ ಇದೆ. ಬೆಂಗಳೂರು, ಕರ್ನಾ ಟಕ ಕೇಂದ್ರಿತವಾಗಿಯೇ ರಾಷ್ಟ್ರದ ಉದ್ದಗಲಕ್ಕೂ ಓಡಾಟ ಮಾಡುತ್ತೇನೆ. ರಾಷ್ಟ್ರ , ಕರ್ನಾಟಕ ಬಿಟ್ಟಿಲ್ಲ. ಅನಂತ ಕುಮಾರ್‌ ಅವರು ಯಾವುದೇ ರಾಜ್ಯದ ಉಸ್ತುವಾರಿ ವಹಿಸಿ ಕೊಂಡಿದ್ದರೂ ಕರ್ನಾಟಕ ಬಿಟ್ಟು ಇರಲಿಲ್ಲ.

– ನಿಮ್ಮನ್ನು ಸಂಪುಟದಿಂದ ಕೈ ಬಿಡಲಿಕ್ಕೆ ಈ ಜವಾಬ್ದಾರಿ ನೀಡಿದ್ದಾರೆ ಅನಿಸುತ್ತಾ ?
ನನಗೆ ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡಲು ಖುಷಿ ಇದೆ. ಪಕ್ಷ ಅನ್ನೋದು ಪ್ರೊಡಕ್ಷನ್‌ ಯುನಿಟ್‌, ಅಧಿಕಾರ ಅನ್ನೋದು ಪ್ರೊಡಕ್ಟ್. ಪ್ರೊಡಕ್ಷನ್‌ ಯುನಿಟ್‌ ಮಜಬೂತ್‌ ಆಗಿದ್ದರೆ, ಪ್ರೊಡಕ್ಟ್ ಕಂಟಿನ್ಯೂ ಆಗಿರುತ್ತದೆ. ಅದಕ್ಕಾಗಿ ನನ್ನ ಆಯ್ಕೆ ಪಕ್ಷವೇ ಆಗಿತ್ತು.

– ದಕ್ಷಿಣ ಭಾರತದಲ್ಲಿ ಪಕ್ಷ ಬಲಪಡಿಸಲು ಯಾವ ತಂತ್ರ ರೂಪಿಸುತ್ತೀರಾ ?
ನಮಗೆ ಹಿಂದೆ ಇದ್ದಂತಹ ಕಠಿನ ಪರಿಸ್ಥಿತಿ ಈಗ ಇಲ್ಲ. ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಪ್ರಮುಖ ನಾಯಕರಲ್ಲಿ ನಮ್ಮ ಪ್ರಧಾನಿ ಒಬ್ಬರು ಇದ್ದಾರೆ. ಆಧುನಿಕ ಚಾಣಕ್ಯ ಎಂದು ಕರೆಯಿಸಿಕೊಳ್ಳುವ ಅಮಿತ್‌ ಶಾ ಅವರ ಮಾರ್ಗದರ್ಶನ ಇದೆ. ಅನುಭವಿ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಇದಾರೆ. ಕರ್ನಾಟಕದವರೇ ಆದ ಬಿ.ಎಲ್‌. ಸಂತೋಷ್‌ ಅವರಿದ್ದಾರೆ. ಅವರೆಲ್ಲರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ.

– ನಿಮಗೆ ಭಾಷಾ ಸಮಸ್ಯೆಯಾಗಿತ್ತು ಅಂತ ಹಿಂದೆ ಹೇಳಿದ್ದೀರಿ ?
ಹೊರ ರಾಜ್ಯದಲ್ಲಿ ಕೆಲಸ ಮಾಡಬೇಕಾದಾಗ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ನನಗೆ ನನ್ನ ಭಾವನೆಯನ್ನು ತಿಳಿಸಲು ಅಗತ್ಯವಿರುವಷ್ಟು ಭಾಷಾ ಜ್ಞಾನ ಇದೆ. ನೀರಿಗೆ ಬಿದ್ದ ಮೇಲೆ ಈಜಲು ಕಲಿಯಲೇಬೇಕು. ಕಲಿಯುತ್ತೇನೆ.

Advertisement

– ನಿಮ್ಮಲ್ಲಿ ಮೂಲ ಮತ್ತು ವಲಸಿಗರ ನಡುವಿನ ಅಂತರ ಹೆಚ್ಚಾಗಿದೆಯಂತಲ್ಲ ?
ಪಕ್ಷಕ್ಕೆ ಬಂದವರು ಎಲ್ಲರೂ ನಮ್ಮವರೇ, ಪಕ್ಷದ ಕಾರ್ಯ ವೈಖರಿಗೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಂಡವರು ನಮ್ಮವರೇ ಆಗಿದ್ದಾರೆ. ಎಲ್ಲರನ್ನೂ ಜೋಡಿಸಿಕೊಂಡೇ ಪಕ್ಷ ಬೆಳೆದಿದೆ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ 2003 ರಲ್ಲಿ ಬಿಜೆಪಿಗೆ ಬಂದಿದ್ದಾರೆ. ಅವರು ಪಕ್ಷಕ್ಕೆ ಈಗ ಹಳಬರು. ಇವತ್ತು ಬಂದವರು ನಾಳೆ ಹಳಬರಾಗುತ್ತಾರೆ.

– ಡಿಸೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎನ್ನುವ ಮಾತು..?
ಅದೆಲ್ಲ ಊಹಾಪೋಹ. ಸದ್ಯಕ್ಕೆ ಆ ರೀತಿಯ ಯಾವುದೇ ಯೋಚನೆ ಪಕ್ಷದ ವಲಯದಲ್ಲಿ ನಡೆದಿಲ್ಲ. ಮುಖ್ಯಮಂತ್ರಿಗಳು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.

– ಬಿಎಸ್‌ವೈ ಅನಂತರ ರಾಜ್ಯ ಬಿಜೆಪಿಯಲ್ಲಿ ನಾಯಕತ್ವದಲ್ಲಿ ತಮ್ಮ ಪಾತ್ರ ಏನು ?
ನೋಡಿ, ನಮ್ಮದು ಕೇಡರ್‌ ಬೇಸ್‌ ಪಕ್ಷ. ಅಟಲ್‌ಜಿ, ಅಡ್ವಾಣಿ ಅನಂತರ ಯಾರು ಎನ್ನುವ ಪ್ರಶ್ನೆಗೆ ಕಾಲವೇ ಮೋದಿ ಅಂತ ಉತ್ತರ ಕೊಟ್ಟಿದೆ. ಬಹಳ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡುತ್ತದೆ. ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಸಿಕ್ಕಾಗ ಅವನು ತನ್ನ ಸಾಮರ್ಥ್ಯ ತೋರಿಸಿದ್ದಾನೆ.

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next