ಚಿಕ್ಕಮಗಳೂರು: ವೀರೇಂದ್ರ ಪಾಟೀಲ್ ಬಳಿಕ ಯಾವ ವೀರಶೈವ ಮುಖಂಡರಿಗೆ ಕಾಂಗ್ರೆಸ್ (congress) ಅಧಿಕಾರ ಕೊಟ್ಟಿದೆ. ಅವರಿಗೆ ಸಾಮರ್ಥ್ಯವಿದ್ದರೆ ವೀರಶೈವ ಮುಖಂಡರನ್ನು ಸಿಎಂ (chief minister) ಎಂದು ಘೋಷಣೆ ಮಾಡಲಿ. ಜಗದೀಶ್ ಶೆಟ್ಟರ್ (Jagadish Shettar) ಅವರನ್ನು ಸಿಎಂ ಎಂದು ಘೋಷಣೆ ಮಾಡುತ್ತಾರಾ? ಶೆಟ್ಟರ್ ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸವಾಲೆಸೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿಂದುತ್ವದ ತತ್ವದ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿರುವ ಪಕ್ಷ. ದೇಶದ ಹಿತದ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿರುವ ಪಕ್ಷ. ಬಿಜೆಪಿ ಬೆಳವಣಿಗೆಯನ್ನು ಯಾರೂ ತಡೆಯಲು ಆಗುವುದಿಲ್ಲ ಎಂದರು.
ಇದನ್ನೂ ಓದಿ:Koppal: ಬಿಜೆಪಿ ಟಿಕೆಟ್ ಗೆ ಸಂಗಣ್ಣ ಕಸರತ್ತು; ಕಾಂಗ್ರೆಸ್ ನಿಂದ ಹಿಟ್ನಾಳ ನಾಮಪತ್ರ
ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟದ್ದು ದುರಾದೃಷ್ಟಕರ. ಸಾಧಕ ಬಾಧಕಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇಷ್ಟು ದಿನ ಬಿಜೆಪಿ ಪರ, ಕಾಂಗ್ರೆಸ್ ವಿರುದ್ಧದ ರಾಜಕಾರಣ ಮಾಡಿದವರು. ನಿನ್ನೆವರೆಗೆ ಕಾಂಗ್ರೆಸ್ ಕೋಮಾದಲ್ಲಿದೆ, ಐಸಿಯುನಲ್ಲಿದೆ ಅದನ್ನು ಯಾರೂ ಬದುಕಿಸಲು ಆಗುವುದಿಲ್ಲ ಎಂದ ನೀವೇ ಕೋಮಾಗೆ ಹೋಗಿರುವ ಪಾರ್ಟಿಗೆ ಹೋಗಿ ಹೋಗಿರುವುದು ದುರಾದೃಷ್ಟಕರ ಎಂದರು.
ಪಕ್ಷ ಸ್ವಾಭಾವಿಕವಾಗಿ ಚೇತರಿಕೆ ಮಾಡಿಕೊಳ್ಳುತ್ತದೆ. ಆದರೆ ವ್ಯಕ್ತಿಗಳು ರಿಕವರಿ ಮಾಡಿಕೊಳ್ಳಲು ಆಗುವುದಿಲ್ಲ. ಜನಸಂಘದಿಂದ ಬಂದವರು ಎಂಬ ಹೆಗ್ಗಳಿಕೆಯಿತ್ತು, ನೀವಿಗ ಅದನ್ನು ಕಳೆದುಕೊಂಡಿದ್ದೀರಾ. ನೀವು ಏನೆಲ್ಲಾ ಆಗಿದ್ದೀರಾ ಅದು ಭಾರತೀಯ ಜನತಾ ಪಾರ್ಟಿಯ ಲೆಕ್ಕಕ್ಕೆ ಸೇರುತ್ತದೆ. ಆ ಪುಣ್ಯದಿಂದ ನೀವು ವಿಮುಖರಾಗಿರುವುದು ದುರಾದೃಷ್ಟಕರ ಎಂದು ಸಿ.ಟಿ ರವಿ ಹೇಳಿದರು.