ಸಮಗ್ರ ಶಿಕ್ಷಣ ಕರ್ನಾಟಕದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಂಸ್ಥೆಗಳ ಸಿಎಸ್‌ಆರ್ ನಿಧಿಯನ್ನು ಗರಿಷ್ಠ ಪ್ರಮಾಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸೆಳೆಯುವ ಬಗ್ಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಐಟಿಬಿಟಿ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಹಾಗೂ ಕೌಶಲಾಭಿವೃದ್ಧಿ ಇಲಾಖೆ ಒಳಗೊಂಡಂತೆ ಒಂದು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಸಿಎಸ್‌ಆರ್ ನಿಧಿಯ ಸದ್ಬಳಕೆಯ ಬಗ್ಗೆ ಶಿಕ್ಷಣ ಇಲಾಖೆ ತತ್‌ಕ್ಷಣವೇ ಒಂದು ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ.
Advertisement
ಸಭೆಯಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, ಗ್ರಾಮದಿಂದ ನಗರಕ್ಕೆ ವಲಸೆ ತಡೆಗೆ ಗ್ರಾಮ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಪ್ರತಿ ಎರಡು ಅಥವಾ ಮೂರು ಗ್ರಾಪಂನಲ್ಲಿ ಎರಡು ಅಥವಾ ಮೂರು ಎಕ್ರೆಗಿಂತ ಹೆಚ್ಚು ಜಾಗವಿರುವ ಶಾಲೆಯೊಂದನ್ನು ಗುರುತಿಸಿ ಖಾಸಗಿ ಕಂಪೆನಿಗಳ ನೆರವಿನಿಂದ ಒಂದೇ ಮಾದರಿಯ ಕಟ್ಟಡ ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದೇವೆ. ಹಾಗೆಯೇ ಶಾಲೆಗಳಿಗೆ ಕಂಪ್ಯೂಟರ್ ಪ್ರಯೋಗಾಲಯ, ಟಿಂಕರಿಂಗ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಹೆಚ್ಚುವರಿ ಕಟ್ಟಡ, ಅಂಗನವಾಡಿ ಕೇಂದ್ರ ಸ್ಥಾಪನೆ, ಶಿಕ್ಷಕರು, ವೃತ್ತಿಪರ ಶಿಕ್ಷಣ ನೀಡಲು ಸಿಎಸ್‌ಆರ್ ನಿಧಿಯನ್ನು ಬಳಕೆ ಮಾಡಲು ಚಿಂತಿಸಿದ್ದೇವೆ ಎಂದು ಹೇಳಿದರು.