Advertisement
ಶಿಕ್ಷಣ ಇಲಾಖೆಯ ಈ ಯೋಜನೆ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳ ಸುಧಾರಣೆಯ ನಿಟ್ಟಿನಲ್ಲಿ ಒಂದು ರಚನಾತ್ಮಕ ಹೆಜ್ಜೆಯಾಗಿದೆ. ಹಾಗೆಂದು ಸಿಎಸ್‌ಆರ್ ನಿಧಿಯನ್ನು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದು ಹೊಸ ಉಪಕ್ರಮವೇನಲ್ಲವಾದರೂ ಈ ಬಾರಿ ಸಿಎಸ್‌ಆರ್ ನಿಧಿಯನ್ನು ಶಾಲೆಗಳ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಲು ಮುಂದಾಗಿರುವುದು ಸ್ವಾಗತಾರ್ಹ.
Related Articles
Advertisement
ಇದೇ ಕಾರಣಕ್ಕಾಗಿ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದ್ದರೆ, ಭಾರೀ ಸಂಖ್ಯೆಯ ಶಾಲೆಗಳು ಕನಿಷ್ಠ ಮೂಲಸೌಕರ್ಯಗಳನ್ನೂ ಹೊಂದಿರದೆ ಸೊರಗಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಇನ್ನಷ್ಟು ಸರಕಾರಿ ಶಾಲೆಗಳು ಬಾಗಿಲು ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ, ಗ್ರಾಮೀಣ ಭಾಗದ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದೆ.
ಸರಕಾರದ ಆಶಯ, ಉದ್ದೇಶಗಳೆಲ್ಲವೂ ಸ್ತುತ್ಯಾರ್ಹವಾದರೂ ಇವೆಲ್ಲವನ್ನೂ ಈಡೇರಿಸುವಲ್ಲಿ ಮತ್ತು ಹೀಗೆ ಅಭಿವೃದ್ಧಿ ಪಡಿಸಲಾದ ಶಾಲೆಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಎಷ್ಟು ಬದ್ಧತೆಯನ್ನು ತೋರಲಿದೆ ಎಂಬುದು ಸದ್ಯದ ಪ್ರಶ್ನೆ. ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿಗೆ ಶಿಕ್ಷಣ ಇಲಾಖೆ ಅಥವಾ ಸರಕಾರದ ಜವಾಬ್ದಾರಿ ಕೊನೆಗೊಳ್ಳದು.
ಸಮತ್ವ ಯೋಜನೆಯಡಿ ಅಭಿವೃದ್ಧಿಗೊಂಡ ಸರಕಾರಿ ಶಾಲೆಗಳ ಸ್ಥಿತಿಗತಿಯ ಬಗೆಗೆ ಶಿಕ್ಷಣ ಇಲಾಖೆ ಸದಾ ನಿಗಾ ಇರಿಸಬೇಕು. ಈ ಶಾಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದರ ಜತೆಯಲ್ಲಿ ಅಗತ್ಯ ಸಂಖ್ಯೆಯ ಶಿಕ್ಷಕರು ಮತ್ತು ಸಿಬಂದಿಯ ನೇಮಕಾತಿ, ವಿದ್ಯಾರ್ಥಿಗಳ ಪ್ರವೇಶಾತಿ, ಹಾಜರಾತಿ, ಫಲಿತಾಂಶ, ಶಿಕ್ಷಣದ ಗುಣಮಟ್ಟ ಇವೆಲ್ಲದರ ಬಗೆಗೆ ಶಿಕ್ಷಣ ಇಲಾಖೆ ಪದೇ ಪದೆ ಪರಿಶೀಲನೆ ನಡೆಸಿ, ತನ್ನ ನಿರೀಕ್ಷಿತ ಉದ್ದೇಶ, ಗುರಿಯನ್ನು ಸಾಧಿಸಬೇಕು.
ಇದೇ ವೇಳೆ ಸ್ಥಳೀಯರು ಕೂಡ ಈ ಶಾಲೆಗಳ ಸುವ್ಯವಸ್ಥಿತ ನಿರ್ವಹಣೆಗೆ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಬೇಕು. ಸರಕಾರಿ ಶಾಲೆಗಳ ಉಳಿವಿಗೆ ಸಾಮೂಹಿಕ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಇದು ಸಾಧ್ಯವಾದರೆ ಸರಕಾರದ ಉದ್ದೇಶ ಈಡೇರಲು ಸಾಧ್ಯ.