ದುಬೈ: ಈಗಾಗಲೇ ಹಲವು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂತಿಮ ಓವರ್ ಗಳ ತಜ್ಞ ಡ್ವೇನ್ ಬ್ರಾವೊ ಗಾಯಾಳಾಗಿದ್ದು, ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಬೀಳುವ ಸಾಧ್ಯತೆ ಇದೆ.
ತಂಡದ ಪ್ರಧಾನ ಕೋಚ್ ಸ್ಟೀಫನ್ ಫ್ಲೆಮಿಂಗ್ ಇಂತಹದೊಂದು ಸುಳಿವು ನೀಡಿದ್ದಾರೆ. ಡೆಲ್ಲಿ ಎದುರಿನ ಶನಿವಾರದ ಪಂದ್ಯದ ವೇಳೆ ಬ್ರಾವೊ ಬಲ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.
ಪರಿಣಾಮ ಮುಂದಿನ ಕೆಲವು ದಿನ ಅಥವಾ ಎರಡು ವಾರ ಕಾಲ ಆಡುವ ಸಾಧ್ಯತೆ ಇಲ್ಲ ಎಂಬುದಾಗಿ ಫ್ಲೆಮಿಂಗ್ ಹೇಳಿದ್ದಾರೆ. ಅಕಸ್ಮಾತ್ ಬ್ರಾವೋ ಎರಡು ವಾರ ಹೊರಗುಳಿದದ್ದೇ ಆದಲ್ಲಿ ಉಳಿದ ಲೀಗ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ಚೆನ್ನೈ ಪ್ಲೇಆಫ್ ಪ್ರವೇಶಿಸಿದರಷ್ಟೇ ಅವರಿಗೆ ಮತ್ತೆ ಈ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗಲಿದೆ ಎಂಬುದು ಸದ್ಯದ ಲೆಕ್ಕಾಚಾರ.
ಇದನ್ನೂ ಓದಿ:ಪಂಜಾಬ್ VS ಮುಂಬೈ: ಒಂದೇ ಪಂದ್ಯದಲ್ಲಿ 2 ಸೂಪರ್ ಓವರ್: ಟಿ20 ಇತಿಹಾಸದಲ್ಲೇ ಮೊದಲು
ಕೂಟದಲ್ಲಿ ಒಂಬತ್ತು ಪಂದ್ಯವಾಡಿರುವ ಸಿಎಸ್ ಕೆ ಮೂರು ಪಂದ್ಯದಲ್ಲಷ್ಟೇ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಡಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕಟ್ ಗಳ ಅಂತರದಲ್ಲಿ ಸೋಲನುಭವಿಸಿದೆ. ಇಂದು ಅಬುಧಾಬಿಯಲ್ಲಿ ನಡೆಯುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸವಾಲನ್ನು ಎದುರಿಸಲಿದೆ.