Advertisement

ರಾಜ್ಯ ಸರ್ಕಾರಿ ನೌಕರರಿಗೆ 2022ರ ವೇಳೆಗೆ ಕೇಂದ್ರದ ಸಮಾನ ವೇತನ: ಸಿ.ಎಸ್.ಷಡಕ್ಷರಿ

06:26 PM Dec 01, 2020 | sudhir |

ಕಲಬುರಗಿ: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಜಾರಿ ಮಾಡಬೇಕು. ನೂತನ ಪಿಂಚಣಿ ಯೋಜನೆ (ಎನ್‍ಪಿಎಸ್)ಯನ್ನು ರದ್ದುಗೊಳಿಸಿ ಎಲ್ಲ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್)ಯನ್ನೇ ಅನ್ವಯಿಸಬೇಕು. ಇವು ರಾಜ್ಯ ಸರ್ಕಾರಿ ನೌಕರರ ಸಂಘದ ಮುಂದಿರುವ ಪ್ರಬಲ ಗುರಿಗಳಾಗಿವೆ. 2022ರ ವೇಳೆಗೆ ಕೇಂದ್ರ ಮಾದರಿ ವೇತನ ಪಡೆದೇ
ಪಡೆಯುತ್ತೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕಿರಣ ಮತ್ತು ಸರ್ಕಾರಿ ನೌಕರರು, ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು.

ಕೇಂದ್ರ ಸರ್ಕಾರದ ಎನ್‍ಪಿಎಸ್ ನೀತಿ ನೌಕರರನ್ನು ಸಂಧ್ಯಾಕಾಲದಲ್ಲಿ ಸಂಕಷ್ಟಕ್ಕೆ ದೂಡಲಿದೆ. ರಾಜ್ಯದಲ್ಲಿ ಸದ್ಯ ಶೇ.48ರಷ್ಟು (2.40 ಲಕ್ಷ) ಎನ್ ಪಿಎಸ್ ನೌಕರರು ಇದ್ದಾರೆ.‌ ಇದು ಇಲ್ಲಿಗೆ ನಿಲ್ಲುವುದಿಲ್ಲ ಮುಂದಿನ ಪೀಳಿಗೆಗೂ ಮುಂದುವರೆಯಲಿದೆ. ಹೀಗಾಗಿ ಎನ್‍ಪಿಎಸ್ ರದ್ಧತಿಗೆ ಒತ್ತಡ ಹೇರುವ ಸಂಬಂಧ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರಿ ನೌಕರರ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸದ್ಯ ರಾಜ್ಯದಲ್ಲಿ 50 ಸಾವಿರದಷ್ಟು ಎನ್‍ಪಿಎಸ್ ನೌಕರರು ಮಾತ್ರ ಹೋರಾಟಕ್ಕೆ ಸಕ್ರಿಯವಾಗಿ ಕೈಜೋಡಿಸುತ್ತಿದ್ದು, ಎಲ್ಲ ನೌಕರರು ನಮ್ಮೊಂದಿಗೆ ಬಂದು ಹೋರಾಟದಲ್ಲಿ ತೊಡಗಬೇಕೆಂದು ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಒಂದೇ ತರನಾದ ಕೆಲಸ ಮಾಡುತ್ತಾರೆ. ಆದರೆ, ವೇತನದಲ್ಲಿ 20ರಿಂದ 50 ಸಾವಿರಕ್ಕೂ ಹೆಚ್ಚು ವ್ಯತ್ಯಾಸ ಇದೆ. ನೌಕರರ ನಡುವೆ ಇಂತಹ ತಾರತಮ್ಯ ಯಾಕೆ ಎಂಬುವುದು ನಮ್ಮ ಪ್ರಶ್ನೆಯಾಗಿದೆ. ಆದ್ದರಿಂದ ಎರಡೂ ನೀತಿಗಳ ವಿರುದ್ಧ ಹೋರಾಟದ ರೂಪರೇಷೆ ಸಿದ್ಧ ಪಡಿಸಲಾಗುತ್ತಿದೆ. ಇದರಿಂದ ಯಾವುದೇ ಕಾರಣ ಹಿಂದೆ ಸರಿಯಲ್ಲ. ಪಲಾಯನವೂ ಮಾಡುವುದಿಲ್ಲ. ಎನ್‍ಪಿಎಸ್, ಒಪಿಎಸ್ ಎನ್ನದೇ ಇಡೀ ನೌಕರರು ಒಟ್ಟಾಗಿದ್ದರೆ ಜಯ ಸುಲಭ ಸಾಧ್ಯವಾಗಲಿದೆ. ಹೋರಾಟಕ್ಕೆ ಕರೆ ಕೊಟ್ಟಾಗ ಇಡೀ ರಾಜ್ಯದ 5.5 ಲಕ್ಷ ನೌಕರರು‌ ಕಚೇರಿಗಳನ್ನು ಸ್ತಬ್ಧ ಮಾಡಿ, ಕುಟುಂಬ ಸಮೇತರಾಗಿ ಬನ್ನಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳ ದಾಳಿ: APMC ಅಧಿಕಾರಿಯ ಬಂಧನ

Advertisement

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಶ್ರಮ: ರಾಜ್ಯದ 78 ಇಲಾಖೆಗಳ ಸರ್ಕಾರಿ ನೌಕರರು ಇದ್ದೇವೆ. ಶೇ.70ರಷ್ಟು ಸಮಸ್ಯೆಗಳು ಶಿಕ್ಷಕರಿಗೆ ಸಂಬಂಧಿಸಿದ್ದಾಗಿವೆ. ಶಿಕ್ಷಕರ‌ ವರ್ಗಾವಣೆ, ಬಡ್ತಿ, ನೇಮಕಾತಿ ನಿಯಮಾವಳಿ ತಿದ್ದುಪಡಿ ಸೇರಿ ಸಾಕಷ್ಟು ಸಮಸ್ಯೆಗಳು
ಇದೆ. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಲಾಗುತ್ತಿದೆ ಎಂದು ಷಡಕ್ಷರಿ‌ ಹೇಳಿದರು.

ಇತ್ತೀಚೆಗೆ ನೌಕರರಿಗೆ ಸಂಘದ ಬಗ್ಗೆ ಭರವಸೆ ಮೂಡುತ್ತಿದೆ. ಸದೃಢ, ಸರ್ಮಥವಾಗಿ ಸಂಘ‌ ಬೆಳೆಯುತ್ತಿದೆ. ಒಂದು ವರ್ಷದಲ್ಲಿ 45 ಸಾವಿರ ನೌಕರರಿಗೆ ಮುಂಬಡ್ತಿ ಕೊಡಿಸಲಾಗಿದೆ. ಎಲ್ಲ ನೌಕರರ ಸಮಸ್ಯೆ ಆಲಿಸಲು, ಪರಿಹರಿಸುವ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ
ಮಟ್ಟದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.

ಮೇ 7ಕ್ಕೆ ನೌಕರರ ದಿನ: ಸರ್ಕಾರಿ ನೌಕರರ ಸಂಸ್ಥಾಪನೆ ದಿನವಾದ ಮೇ 7ರಂದು ನೌಕರರ ದಿನಾಚರಣೆಗೆ ತೀರ್ಮಾನಿಸಲಾಗಿದೆ. ಇದು ಮುಂದಿನ ವರ್ಷದಿಂದ ಜಾರಿ ಬರಲಿದ್ದು, ಉತ್ತಮ‌ ನೌಕರರನ್ನು ಗುರುತಿಸಿ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ. ನೌಕರರ ಐದು ಸಾವಿರ‌ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತದೆ ಎಂದು‌ ವಿವರಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ್, ಗೌರವ ಅಧ್ಯಕ್ಷ‌ ಶಿವರುದ್ರಯ್ಯ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಷಡಶ್ಯಾಳ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಸೇರಿ ಅಧಿಕ ನೌಕರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next