Advertisement

ರತ್ನಪ್ರಭಾಗೆ ಒಲಿದ ಸಿಎಸ್‌ ಹುದ್ದೆ

06:40 AM Nov 29, 2017 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.  ಈ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಮ್ಮೆಗೇ ಇಬ್ಬರು ಮಹಿಳೆಯರು ಅತ್ಯಂತ ಪ್ರಮುಖ ಹುದ್ದೆ ಗಳಲ್ಲಿ ಆಸೀನರಾದಂತಾಗಿದೆ. ಇತ್ತೀಚೆಗಷ್ಟೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ನೀಲಮಣಿರಾಜು ನೇಮಕವಾಗಿದ್ದರು.

Advertisement

ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ ನ. 30ರಂದು ನಿವೃತ್ತ ರಾಗಲಿದ್ದು ಅವರ ಸ್ಥಾನಕ್ಕೆ ಪ್ರಸ್ತುತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರತ್ನಪ್ರಭಾ ಅವರನ್ನು ನೇಮಿಸಲಾಗಿದೆ. ಜತೆಗೆ ಟಿ.ಎಂ. ವಿಜಯ ಭಾಸ್ಕರ್‌ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೊಣೆ ನೀಡಲಾಗಿದೆ.

ಆಂಧ್ರ ಮೂಲದ 1981ರ ಬ್ಯಾಚ್‌ನ ಅಧಿಕಾರಿ ಯಾಗಿರುವ ಕೆ.ರತ್ನಪ್ರಭಾ ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಗುಲ್ಬರ್ಗ ಪ್ರಾದೇಶಿಕ ಆಯುಕ್ತರಾಗಿದ್ದ ರತ್ನಪ್ರಭಾ ಅವರು ಅನಂತರ ಬೀದರ್‌, ರಾಯಚೂರು ಜಿಲ್ಲಾಧಿಕಾರಿಯಾಗಿ ಸಾಕ್ಷರತೆಗೆ ಹೆಚ್ಚು ಒತ್ತು ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನಾ ನಿರ್ದೇಶಕಿಯಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡಿದ್ದರು. 

1995ರ ವರೆಗೂ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ರತ್ನಪ್ರಭಾ ಅವರು 1995ರಲ್ಲಿ ವಿಶಾಖಪಟ್ಟಣಂ ಎಕ್ಸ್‌ಪೋರ್ಟ್‌ ಪ್ರೊಸೆಸಿಂಗ್‌ ಝೋನ್‌ನ ಅಭಿವೃದ್ಧಿ ಆಯುಕ್ತರಾಗಿ ನಿಯೋಜನೆಗೊಂಡು 2004ರ ವರೆಗೂ ಕಾರ್ಯನಿರ್ವಹಿಸಿದರು. ಅಂತಾರಾಜ್ಯ ನಿಯೋಜನೆ ಮೇರೆಗೆ 2007-09ರಲ್ಲಿ ಆಂಧ್ರಪ್ರದೇಶದಲ್ಲಿ ವಾರ್ತಾ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.ಹೈದರಾಬಾದ್‌ ಕೇಂದ್ರ ಸೆನ್ಸಾರ್‌ ಬೋರ್ಡ್‌ನ ಪ್ರಾದೇಶಿಕ ಆಯುಕ್ತರೂ ಆಗಿದ್ದರು. 

ಕೇಂದ್ರ ಸೇವೆಗೆ ನಿಯೋಜನೆಗೊಂಡು ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಮಹಿಳಾ ಸಬಲೀಕರಣ ಮಿಷನ್‌ನ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಸೇವೆಗೆ ಮರಳಿದ ನಂತರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next