Advertisement

ಮಂಗಳೂರು: ಸಿಆರ್‌ಝಡ್‌ ಮರಳುಗಾರಿಕೆ ಆದೇಶ ಗೊಂದಲಕಾರಿ

12:02 AM Jan 08, 2023 | Team Udayavani |

ಮಂಗಳೂರು: ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌)ದಲ್ಲಿ ಮರಳು ತೆಗೆಯುವುದಕ್ಕೆ ಜಿಲ್ಲಾಧಿಕಾರಿ ಇತ್ತೀಚೆಗೆ ಅವಕಾಶ ಮಾಡಿಕೊಟ್ಟಿದ್ದರೂ ಅದರಲ್ಲಿರುವ ಷರತ್ತುಗಳು ನ್ಯಾಯಾಂಗ ನಿಂದನೆಗೆ ಪೂರಕವಾಗಿವೆ. ಹಾಗಾಗಿ ಹಿಂದಿನಂತೆಯೇ ಮರಳು ತೆಗೆಯಲು ಹಾಗೂ ಸಾಗಾಟಕ್ಕೆ ಅನುವು ಮಾಡಿಕೊಡಬೇಕು ಎಂದು ತಾತ್ಕಾಲಿಕ ಪರವಾನಿಗೆದಾರರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Advertisement

ಹಿಂದೆ ಚೆನ್ನೈ ಹಸುರು ನ್ಯಾಯಾಧಿಕರಣವು ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಿದ್ದ ಆದೇಶವನ್ನು ದ.ಕ. ಜಿಲ್ಲೆಯಲ್ಲೂ ಅನ್ವಯಿಸಿದ್ದರ ವಿರುದ್ಧವಾಗಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೆವು. ಅದರಲ್ಲಿ ಹೈಕೋರ್ಟ್‌ ದ.ಕ. ಜಿಲ್ಲಾಡಳಿತದ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಉಲ್ಲೇಖೀಸಿ ಜಿಲ್ಲಾಡಳಿತ 14.11.2022ರಂದು ಏಳು ಸದಸ್ಯರ ಸಮಿತಿಯ ಸಭೆ ನಡೆಸಿ 15.12.2022ರಂದು ಮರುಸ್ಥಾಪಿತ ತಾತ್ಕಾಲಿಕ ಪರವಾನಿಗೆಯನ್ನು ವಿತರಿಸಿತ್ತು. ಆದರೆ ಇದು ರಾಜ್ಯ ಉಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪರವಾನಿಗೆ ದಾರರು ಅಭಿಪ್ರಾಯ ಪಟ್ಟಿದ್ದಾರೆ.

ಹೆಚ್ಚಿದ ಅಕ್ರಮ
ಮರಳು ತೆಗೆಯುವವರು ಅಧಿಕೃತ ವಾಗಿ 296ರಷ್ಟು ದೋಣಿಗಳನ್ನು ಬಳಸ ಬಹುದು. ಆದರೆ ಈಗ ಈ ಗೊಂದಲ ಮಯ ಸನ್ನಿವೇಶ ಬಳಸಿಕೊಂಡು 1 ಸಾವಿರಕ್ಕೂ ಅಧಿಕ ದೋಣಿಗಳು ಅಕ್ರಮ ಮರಳು ಗಾರಿಕೆಯಲ್ಲಿ ತೊಡಗಿವೆ. ಹಿಂದೆ ಸ್ಯಾಂಡ್‌ ಬಜಾರ್‌ನಲ್ಲಿ ನಾವು ನೋಂದಣಿ ಯಾಗಿರಬೇಕಿತ್ತು, ತೆಗೆದ ಮರಳನ್ನು ಸ್ಯಾಂಡ್‌ ಬಜಾರ್‌ ಮುಖೇನ ಬರುವ ಬುಕ್ಕಿಂಗ್‌ ಆಧರಿಸಿ ಗ್ರಾಹಕರಿಗೆ ತಲಪಿಸಲು ಅವಕಾಶವಿತ್ತು. ಈಗ ಮರಳು ತೆಗೆಯಲು ಮಾತ್ರವೇ ಅವಕಾಶ. 15.12.2022ರಂದು ನೀಡಿರುವ 7 ಮಂದಿ ಸದಸ್ಯರ ಸಮಿತಿಯ ಗೊಂದಲಮಯ ಆದೇಶದಿಂದ ಸಮಸ್ಯೆಯಾಗಿದೆ. ಇದರಿಂದ ಕಾನೂನು ಬಾಹಿರವಾಗಿ ಮರಳುಗಾರಿಕೆಯೂ ನಡೆಯುತ್ತಿದೆ ಎಂದು ತಾತ್ಕಾಲಿಕ ಪರವಾನಿಗೆದಾರ ಅನಿಲ್‌ ತಿಳಿಸಿದ್ದಾರೆ.

ಗೊಂದಲದ ಆದೇಶ
ಡಿಸೆಂಬರ್‌ 5ರಂದು ಹೊರಡಿಸಿರುವ ಆದೇಶವು ಗೊಂದಲಕಾರಿಯಾಗಿದೆ, ಅದರಲ್ಲಿ ಮರಳು ತೆಗೆಯುವುದಕ್ಕೆ ಮಾತ್ರ ಪರವಾನಿಗೆ ಒದಗಿಸಿದ್ದು ಮರಳು ಮಾರಾಟ ಮಾಡುವುದಕ್ಕೆ ಅನುಮತಿ ಇಲ್ಲ. ದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಸಾಗಿಸಬೇಕೆಂದು ತಿಳಿಸಲಾಗಿದೆ. ಆದರೆ ದಾಸ್ತಾನು ಕೇಂದ್ರದ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಜಿಪಿಎಸ್‌ ಅಳವಡಿಸಿದ 6 ಚಕ್ರದ ವಾಹನಗಳಲ್ಲಿ ಮಾತ್ರ ಮರಳು ವಿತರಿಸಬೇಕು ಎಂದು ತಿಳಿಸಿರುತ್ತಾರೆ, ಆದರೆ ಯಾರಿಗೆ ವಿತರಿಸುವುದು ಹಾಗೂ ದಾಸ್ತಾನು ಕೇಂದ್ರಕ್ಕೆ ಯಾಕಾಗಿ ಸಾಗಿಸಬೇಕು ಎಂಬಿತ್ಯಾದಿ ಗೊಂದಲಗಳು ಉಂಟಾಗಿವೆ. ಮರಳುದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಅಥವಾ ಇತರರಿಗೆ ವಿತರಿಸಬೇಕಾದರೆ ವಾಹನಗಳಿಗೆ ರಹದಾರಿ ಪರವಾನಿಗೆ ಕಾನೂನಾತ್ಮಕವಾಗಿ ಬೇಕಾಗಿದೆ. ಆದರೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ.

ಮರುಸ್ಥಾಪಿತ ತಾತ್ಕಾಲಿಕ ಪರವಾನಿಗೆಯಲ್ಲಿರುವ ಷರತ್ತಿನಲ್ಲಿ ದಿಬ್ಬದಿಂದ ಮರಳನ್ನು ದಾಸ್ತಾನು ಕೇಂದ್ರಕ್ಕೆ ಸಾಗಾಣಿಕೆ ಮಾಡಲು ಇರುವ ಮಾರ್ಗದ ನಕ್ಷೆಯನ್ನು ಕಚೇರಿಗೆ ಸಲ್ಲಿಸಬೇಕು ಎಂದು ಕೇಳಲಾಗಿದೆ. ಆದರೆ ಎಲ್ಲಿಯೂ ದಾಸ್ತಾನು ಕೇಂದ್ರವನ್ನು ನಮೂದಿಸದೇ ಇರುವುದರಿಂದ ಯಾವ ರಸ್ತೆ ನೀಡಬೇಕೆನ್ನುವುದು ತಿಳಿಯದಾಗಿದೆ ಎಂದು ಪರವಾನಿಗೆದಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next