Advertisement

ಕಟ್ಟಡ ಕಟ್ಟಲು ಅನುಕೂಲ, ಮರಳುಗಾರಿಕೆಗೆ ಅನನುಕೂಲ

10:09 AM Nov 04, 2018 | |

ಉಡುಪಿ: ಪುನಾರಚನೆಗೊಂಡ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ನಕಾಶೆ ಅನುಕೂಲ- ಅನನುಕೂಲ ಎರಡನ್ನೂ ಉಂಟು ಮಾಡಿದೆ.

Advertisement

ಸಿಆರ್‌ಝಡ್‌ 2 ವ್ಯಾಪ್ತಿ ಹೆಚ್ಚಿಸಿರು ವುದರಿಂದ ಜನಸಾಮಾನ್ಯರು ಕಟ್ಟಡ ನಿರ್ಮಿಸಬಹುದು. ಆದರೆ ಸಿಆರ್‌ಝಡ್‌5 ವಲಯದಲ್ಲಿ ಕಾರವಾರ, ಕುಂದಾಪುರ ತಾಲೂಕುಗಳನ್ನೂ ಸೇರಿಸಿದ್ದು, ಇದು ಅತಿಸೂಕ್ಷ್ಮ ಜೀವಿಗಳ ತಾಣವಾದ ಕಾರಣ ಇಲ್ಲಿನ ನದಿ ಪಾತ್ರಗಳಲ್ಲಿ ಮೀನುಗಾರಿಕೆಗೆ ಅವಕಾಶವಿದ್ದರೂ ಮರಳು ತೆಗೆಯಲು ನಿರ್ಬಂಧವಿದೆ.
ಸಿಆರ್‌ಝಡ್‌ 1ನ್ನು ನಿಷೇಧಾತ್ಮಕ ಪ್ರದೇಶ ವೆಂದು ಘೋಷಿಸಲಾಗಿದೆ. ಇದರಲ್ಲಿ ಕಾಂಡ್ಲಾ ವನ ಇರುವ ಜಾಗ, ನದಿಪಾತ್ರದಲ್ಲಿ ಸಮುದ್ರ ಇಳಿತ ಸಮಯದಲ್ಲಿ ಏಡಿ, ಕಪ್ಪೆ ಚಿಪ್ಪು ದೊರಕುವ ಜಾಗ ಸೇರಿವೆ. ಇಂಥ ಪ್ರದೇಶಗಳು ಬಹುತೇಕ ಎಲ್ಲ ನದಿಪಾತ್ರಗಳಲ್ಲಿ ಇವೆ. ಕಾಂಡ್ಲಾ ವನ ಹೆಚ್ಚು ಇರುವುದು ಕುಂದಾಪುರ ತಾಲೂಕಿ ನಲ್ಲಿ. ಇದನ್ನು ಜೀವವೈವಿಧ್ಯ ಸಕ್ರಿಯವಾ ಗಿರುವ ಜಾಗ ಎಂದು ಪರಿಗಣಿಸಲಾಗಿದೆ. ಭರತ ರೇಖೆಯಿಂದ 500 ಮೀ. ವರೆಗೆ ಹಾಗೂ ನದಿಪಾತ್ರದಲ್ಲಿ ಲವಣಾಂಶ 5 ಪಿಪಿಟಿಯ ವರೆಗೆ ಅಥವಾ ಅಣೆಕಟ್ಟಿನ ವರೆಗಿನ ಪ್ರದೇಶವನ್ನು ಸಿಆರ್‌ಝಡ್‌ ಪ್ರದೇಶವೆಂದು ಗುರುತಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ 2 ವ್ಯಾಪ್ತಿಯಲ್ಲಿ ಹಳೆ ನಕ್ಷೆಯಂತೆ 19 ಗ್ರಾಮಗಳಿದ್ದವು. ಈಗ ಹೊಸ ನಕ್ಷೆ ಪ್ರಕಾರ 27 ಗ್ರಾಮಗಳು ಹೊಸದಾಗಿ ಸೇರ್ಪಡೆಗೊಂಡಿದ್ದು, ಒಟ್ಟು 46 ಗ್ರಾಮಗಳಾಗಿವೆ. ಅಂದರೆ ಜಿಲ್ಲೆಯ ಶೇ.95ರಷ್ಟು ಸಿಆರ್‌ಝಡ್‌ ಹೆಚ್ಚುವರಿ ಪ್ರದೇಶವು ಅಭಿವೃದ್ಧಿಗೆ ಪೂರಕವಾಗಿರುವಂತೆ ಮಾರ್ಪಾಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ 2 ಪ್ರದೇಶ ದಲ್ಲಿ ಹಿಂದೆ 5 ಗ್ರಾಮಗಳು ಇದ್ದು, ಹೊಸತಾಗಿ 18 ಸೇರ್ಪಡೆಗೊಂಡಿವೆ. ಒಟ್ಟು 23 ಗ್ರಾಮಗಳನ್ನು ಅಭಿವೃದ್ದಿಗೆ ಪೂರಕವಾದ ಪ್ರದೇಶಗಳನ್ನಾಗಿ ಘೋಷಿಸಿದೆ. ಜಿಲ್ಲೆಯಲ್ಲಿ ಶೇ. 15-20ರಷ್ಟು ಹೆಚ್ಚುವರಿ ಪ್ರದೇಶಗಳನ್ನು ಅಭಿವೃದ್ಧಿಗೆ ಪೂರಕ ವಾಗಿ ಮಾರ್ಪಾಡಿಸಲಾಗಿದೆ.
 
ನದಿ ಪಾತ್ರದ ವ್ಯಾಪ್ತಿ
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ತುಂಬೆ ಅಣೆಕಟ್ಟಿನ ವರೆಗೆ, ಗುರುಪುರ ನದಿಯಲ್ಲಿ ಮಳವೂರು ಕಿಂಡಿ ಅಣೆಕಟ್ಟಿನ ವರೆಗೆ, ನಂದಿನಿ ನದಿಯಲ್ಲಿ ಚೇಳಾರು ವರೆಗೆ ಹಾಗೂ ಶಾಂಭವಿ ನದಿಯಲ್ಲಿ ಕರ್ನಿರೆಯ ವರೆಗೆ ನದಿ ಪಾತ್ರದ ಕರಾವಳಿ ನಿಯಂತ್ರಣ ವಲಯ ಮಿತಿ ಇದೆ.

ಉಡುಪಿ ಜಿಲ್ಲೆಯಲ್ಲಿ ಉದ್ಯಾವರ ನದಿ ಪಾತ್ರದಲ್ಲಿ ಮಣಿಪುರ- ಕುರ್ಕಾಲು ಅಣೆಕಟ್ಟು, ಸ್ವರ್ಣಾ ನದಿಯಲ್ಲಿ ಬಜೆ ಅಣೆಕಟ್ಟು, ಸೀತಾ ನದಿಯಲ್ಲಿ ಹನೆಹಳ್ಳಿ ಅಣೆಕಟ್ಟು, ವಾರಾಹಿ ನದಿಯಲ್ಲಿ ಬಸೂರು ಅಣೆಕಟ್ಟು, ಚಕ್ರಾ ನದಿಯಲ್ಲಿ ಹೆಮ್ಮಾಡಿಯ ವರೆಗೆ, ಸೌಪರ್ಣಿಕಾ ನದಿಯಲ್ಲಿ ಸೇನಾಪುರ ಕಿಂಡಿ ಅಣೆಕಟ್ಟಿನ ವರೆಗೆ, ಯಡಮಾವಿನ ಹೊಳೆಯಲ್ಲಿ ಕಿರಿಮಂಜೇಶ್ವರ- ಹೆರಂಜಾಲು ವರೆಗೆ ಹಾಗೂ ಬೈಂದೂರು ಹೊಳೆಯಲ್ಲಿ ಬಿಜೂರು ತಗ್ಗರ್ಸೆ ಕಿಂಡಿ ಅಣೆಕಟ್ಟಿ ನವರೆಗೆ ನದಿ ಪಾತ್ರದ ಸಿಆರ್‌ಝೆಡ್‌ ಮಿತಿ ಇದೆ. ಇವುಗಳು ವಲಯ 1, 2 (ನಗರ ಪ್ರದೇಶದಲ್ಲಿ), 3 (ಗ್ರಾಮೀಣ), 4 ಒಳಗೊಂಡಿವೆ. ಕೇವಲ ವಲಯ 5 ಮಾತ್ರ ಈ ವ್ಯಾಪ್ತಿಯಲ್ಲಿ ಬರುವುದಿಲ್ಲ. 

ಕೇಂದ್ರ ಹಸಿರು ನ್ಯಾಯಪೀಠದ ಆದೇಶಾನು ಸಾರ ಪರಿಸರ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ವಲಯಗಳು ಕೂಡ ಅಧಿಸೂಚನೆಯಲ್ಲಿ ಇರುವುದರಿಂದ ಮಾರ್ಗಸೂಚಿಗ ಳನ್ವಯ ಅವುಗಳನ್ನು ನಕ್ಷೆಯಲ್ಲಿ ತೋರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರಕರಣಗಳನ್ನು ಪರಿಶೀಲಿಸಬೇಕಾದಲ್ಲಿ ಕೇಂದ್ರದಿಂದ ಅನುಮೋದನೆಗೊಂಡ ನಕ್ಷೆಯಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

Advertisement

ಸಿಆರ್‌ಝಡ್‌2ರ  ಹೊಸ ಗ್ರಾಮಗಳು
ಉಡುಪಿ ಜಿಲ್ಲೆ
* ಕಾಪು ತಾಲೂಕಿನ ಮೂಳೂರು, ಪಡು, ಉಳಿಯಾರಗೋಳಿ
* ಉಡುಪಿಯ ಉದ್ಯಾವರ, ಕುತ್ಪಾಡಿ, ಕಡೆಕಾರು, ಕಿದಿಯೂರು, ತೆಂಕನಿಡಿಯೂರು, ಬಡಾನಿಡಿಯೂರು, ಹೆರ್ಗ, ಶಿವಳ್ಳಿ, ಪಡುತೋನ್ಸೆ, ಮೂಡುತೋನ್ಸೆ, ಪುತ್ತೂರು, ಸಾಲಿಗ್ರಾಮದ ಗುಂಡ್ಮಿ, ಪಾರಂಪಳ್ಳಿ, ಅಂಬಲಪಾಡಿ. 
* ಕುಂದಾಪುರ ತಾಲೂಕಿನ ಕುಂದಾಪುರ ಕಸಬಾ, ವಡೇರಹೋಬಳಿ, ಹಂಗಳೂರು.

ದ.ಕ. ಜಿಲ್ಲೆ
* ಸಸಿಹಿತ್ಲು, ಪಡುಪಣಂಬೂರು, ಹಳೆಯಂಗಡಿ, ಪಣಂಬೂರು, ಬಜಾಲ್‌, ಕಣ್ಣೂರು, ಅಡ್ಯಾರು, ಅರ್ಕುಳ, ಉಳ್ಳಾಲ (ಸಿಆರ್‌ಝಡ್‌1ರಿಂದ 2ಕ್ಕೆ)
* ಬಪ್ಪನಾಡು, ಮಾನಂಪಾಡಿ, ಪಾವಂಜೆ, ಚೇಳಾÂರು, ಬಂಗ್ರ ಕುಳೂರು, ತೋಕೂರು, ಕುಂಜತ್ತ ಬೈಲು, ಕೆಂಜಾರು, ಮರಕಡ, ತಣ್ಣೀರುಬಾವಿ, ಪಡುಶೆಡ್ಡೆ, ಮಳವೂರು, ಜಪ್ಪಿನಮೊಗರು, ಪೆರ್ಮನ್ನೂರು, ಮಣ್ಣೂರು, ಅಂಬ್ಲಿ ಮೊಗರು, ಹರೆಕಳ, ಸೋಮೇಶ್ವರ.

ನಕ್ಷೆಯ ವೈಶಿಷ್ಟ್ಯಗಳು
* ವಿಕೋಪ ರೇಖೆ ಅಳವಡಿಸಲಾಗಿದೆ. 
* ಜಿಯೋರೆಫ‌ರೆನ್ಸ್‌ ಗ್ರಾಮ ನಕ್ಷೆಗಳನ್ನು ಅಳವಡಿಸಿ ಅದರ ಮೇಲೆ ಸಿಆರ್‌ಝಡ್‌ ನಕ್ಷೆ ಅಳವಡಿಸಲಾಗಿದೆ. 
* ಗ್ರಾಮ, ತಾಲೂಕು ಮತ್ತು ಜಿಲ್ಲಾ ಗಡಿ ರೇಖೆಗಳ ಜತೆಗೆ ಸ್ಥಳೀಯ ಯೋಜನಾ ಪ್ರದೇಶಗಳ ಗಡಿರೇಖೆಗಳನ್ನು ಅಳವಡಿಸಲಾಗಿದೆ. 
* ಮೀನುಗಾರಿಕೆ ಮೂಲ ಸೌಕರ್ಯಗಳನ್ನು ಗುರುತಿಸಲಾಗಿದೆ. 
* ಮೀನಿನ ಸಂತಾನೋತ್ಪತ್ತಿ ಪ್ರದೇಶಗಳು ಹಾಗೂ ಸೂಕ್ಷ್ಮ ವಲಯಗಳನ್ನು ಹೊಸದಾಗಿ ಗುರುತಿಸಲಾಗಿದೆ. 
* ನದಿ ಪಾತ್ರದ ಸಿಆರ್‌ಝಡ್‌ ಮಿತಿಯನ್ನು ಹಲವು ಕಡೆ ಕಡಿಮೆಗೊಳಿಸಲಾಗಿದೆ.
* ಸಿಆರ್‌ಝಡ್‌ 3ರಲ್ಲಿ ಭರತ ರೇಖೆಯಿಂದ 200 ಮೀ. ವರೆಗಿನ ಪ್ರದೇಶವನ್ನು ಅಭಿವೃದ್ಧಿ ನಿಷೇಧಿತ ಸ್ಥಳವೆಂದು ಪರಿಗಣಿಸಲಾಗಿದ್ದು, ಇಲ್ಲಿ ಹೊಸ ಕಟ್ಟಡ ಕಟ್ಟುವಂತಿಲ್ಲ. ಈಗಾಗಲೇ ಇರುವ ಕಟ್ಟಡವನ್ನು ಉಳಿಸಿಕೊಳ್ಳಬಹುದು, ನವೀಕರಿಸಬಹುದು. 200 ಮೀ.ಗಳಿಂದ 500 ಮೀ. ವರೆಗಿನ ಪ್ರದೇಶದಲ್ಲಿ ಹೊಸದಾಗಿ ಮನೆ ಕಟ್ಟಬಹುದು.
* ಸಿಆರ್‌ಝಡ್‌4ರ ವ್ಯಾಪ್ತಿ ನದಿಪಾತ್ರದ ನೀರಿನಲ್ಲಿ 5 ಪಿಪಿಟಿ ಲವಣಾಂಶವಿರುವ ಪ್ರದೇಶ ಹಾಗೂ ಸಮುದ್ರ ನೀರಿನಲ್ಲಿ ಬೀಚ್‌ನಿಂದ 12 ನಾಟಿಕಲ್‌ ಮೈಲಿಯ ವರೆಗೆ ಇರುತ್ತದೆ.
* ಸಿಆರ್‌ಝಡ್‌ 5 ವಲಯ ಅತಿಸೂಕ್ಷ್ಮ ಪ್ರದೇಶ. ಕಾರವಾರ ಮತ್ತು ಕುಂದಾಪುರ ತಾಲೂಕುಗಳು ಈ ವಲಯದಲ್ಲಿವೆ. ಇಲ್ಲಿನ ನದಿಪಾತ್ರಗಳಲ್ಲಿ ಅತಿಸೂಕ್ಷ್ಮ ವಲಯಗಳಾಗಿದ್ದು, ಇಲ್ಲಿ ಅತಿಸೂಕ್ಷ್ಮ ಜೀವಿಗಳು ಇರುತ್ತವೆ ಎಂದು ಪರಿಗಣಿಸ ಲಾಗಿದೆ. ಇಲ್ಲಿ ಮೀನುಗಾರಿಕೆ ನಡೆಸಬಹುದು.
* ಇಲ್ಲಿ ಮರಳುಗಾರಿಕೆ ನಡೆಸುವಂತಿಲ್ಲ. ಆದರೆ ನದಿಪಾತ್ರದ ಬಂದರಿನಲ್ಲಿ ಹೂಳು ಎತ್ತುವುದಕ್ಕೆ ಅವಕಾಶವಿದೆ. ಮೀನುಗಾರಿಕೆ ದೋಣಿಗಳ ಸಂಚಾರಕ್ಕೆ ತೊಂದರೆಯಾದಲ್ಲಿ ಅಂತಹ ಕಡೆ ಹೂಳೆತ್ತಲು ಅವಕಾಶವಿದೆ. 

ಹಸಿರು ಪೀಠದ ಆದೇಶಾನುಸಾರ ಸಿಆರ್‌ಝಡ್‌ 2ರ ವ್ಯಾಪ್ತಿ ವಿಸ್ತರಿಸಿರುವುದರಿಂದ ಅಭಿವೃದ್ಧಿಗೆ ಅನುಕೂಲವಾಗಿದೆ.
ಡಾ| ದಿನೇಶ ಕುಮಾರ್‌  ವೈ.ಕೆ.,  
ಅರಣ್ಯ, ಜೀವಿ ಪರಿಸ್ಥಿತಿ, ಪರಿಸರ ಇಲಾಖೆಯ ಪ್ರಾ. ನಿರ್ದೇಶಕರು, ದ.ಕ., ಉಡುಪಿ

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next