ಬೆಳಗಾವಿ: ಪಿಎಸ್‌ಐ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದು ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಿಂದ ಬೆಳಗಾವಿಗೆ ನ್ಯಾಯ ಕೇಳಲು ಬಂದಿದ್ದು, ಸುವರ್ಣ ವಿಧಾನಸೌಧ ಬಳಿ ಬಂದು ನಮಗೆ ನ್ಯಾಯ ಕೊಡಿ ಎಂದು ಗೋಗರೆಯುತ್ತಿದ್ದಾರೆ.
ಪಿಎಸ್‌ಐ ಪರೀಕ್ಷೆ ಬರೆದು ವರ್ಷ ಕಳೆದರೂ ನೇಮಕಾತಿ ಆದೇಶ ನೀಡಿಲ್ಲ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ನಮ್ಮ ಕಡೆಗೂ ಸರ್ಕಾರ ಗಮನಹರಿಸಬೇಕು. ನ್ಯಾಯ ನೀಡಿ ನಮ್ಮ ಬದುಕು ಹಸನುಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇಲ್ಲಿಯ ಸುವರ್ಣ ವಿಧಾನಸೌಧ ಬಳಿ ಬಸ್ತವಾಡ ಗ್ರಾಮದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಚೆನ್ನಾಗಿ ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿದ್ದೇವೆ. ಆಯ್ಕೆ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಸರ್ಕಾರ ಮಾತ್ರ ನಮ್ಮತ್ತ ನೋಡುತ್ತಿಲ್ಲ. ಬೆಳಗಾವಿಯಲ್ಲಾದರೂ ನಮ್ಮತ್ತ ಸರ್ಕಾರ ಕಣ್ಣು ತೆರೆದು ನೋಡುಬೇಕು ಎಂದು ಅಂಗಲಾಚಿ ಬೇಡಿಕೊಂಡರು.
ಮೈಸೂರು, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು, ದಾವಣಗೆರೆ, ರಾಯಚೂರು, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ ಸೇರಿ ರಾಜ್ಯದ ಎಲ್ಲ ಕಡೆಯಿಂದಲೂ ಅಭ್ಯರ್ಥಿಗಳು ಬಂದು ಗೃಹ ಸಚಿವರ ಎದುರು ಅಳಲು ತೋಡಿಕೊಂಡರು. ಕೆಲವರು ಖಾಸಗಿ ಉದ್ಯೋಗ ಬಿಟ್ಟು ಪರೀಕ್ಷೆ ಬರೆದು ಪಾಸಾಗಿದ್ದರು. ಈಗ ಅದು ಇಲ್ಲ, ಇದೂ ಇಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಇನ್ನೂ ಕೆಲವರು 35 ವಯಸ್ಸಿನವರು ಪಾಸಾದವರು ಈಗ ವಯೋಮಿತಿ ಮೀರಿದೆ. ಮರು ಪರೀಕ್ಷೆ ನಡೆಸಿದರೆ ನಾವು ವಯೋಮಿತಿಗೆ ಅರ್ಹರಾಗುವುದಿಲ್ಲ. ನಮ್ಮ ಬದುಕು ಮೂರಾಬಟ್ಟೆ ಆಗಿದೆ ಎಂದು ಕಣ್ಣೀರು ಹಾಕಿದರು.
545 ಪಿಎಸ್‌ಐ ಹುದ್ದೆ ನೇಮಕಾತಿ ವೇಳೆ ಅಕ್ರಮ ಕಂಡು ಬಂದು ಈಗಾಗಲೇ ಸಿಐಡಿ ಸೂಕ್ತ ತನಿಖೆ ನಡೆಸಿ ಅಕ್ರಮ ಎಸಗಿದವರನ್ನು ಹೆಡೆಮುರಿ ಕಟ್ಟಿದೆ. ಈ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಪರೀಕ್ಷೆಯಲ್ಲಿ ಅಕ್ರಮ ಮಾಡಿದವರು ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದಾರೆ. ಇನ್ನುಳಿದ 490ಕ್ಕೂ ಹೆಚ್ಚು ಅಭ್ಯರ್ಥಿಗಳು ಪಿಎಸ್‌ಐ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದಿದ್ದು, ಈ ಎಲ್ಲರಿಗೂ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಪ್ರಕರಣ ನ್ಯಾಯಾಲಯದಲ್ಲಿದೆ. ತನಿಖೆ ಪ್ರಗತಿಯಲ್ಲಿದೆ. ನ್ಯಾಯಾಲಯದ ತೀಪುì ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ನಾವು ಶ್ರಮಪಟ್ಟು ಓದಿ ಸರ್ಕಾರದ ನಿರ್ದೇಶನದಂತೆ ಪರೀಕ್ಷೆ ಬರೆದು ಮೆರಿಟ್ ಆಧಾರದ ಮೇಲೆ ಆಯ್ಕೆ ಆಗಿದ್ದೇವೆ. ಕೆಲವರು ಮಾಡಿದ ತಪ್ಪಿಗೆ ನಾವೇಕೆ ಶಿಕ್ಷೆ ಅನುಭವಿಸಬೇಕು. ಈ ಹಿಂದೆ ಅನೇಕ ಅಕ್ರಮ ನಡೆದಿರುವಾಗ ಮರು ಪರೀಕ್ಷೆ ನಡೆಸದೆ ಪ್ರಾಮಾಣಿಕರಿಗೆ ನೇಮಕಾತಿ ಆದೇಶ ನೀಡಿದ್ದಾರೆ. ಪಿಎಸ್‌ಐ ಪರೀಕ್ಷೆಯಲ್ಲಿಯೇ ಏಕೆ ಈ ತರಹ ಆಡುತ್ತಿದ್ದಾರೆ. ನಮ್ಮ ನೋವು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.