ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಹತ್ತಿರ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಿಬ್ಬಂದಿ ಮತ್ತು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಕ್ರೂಸರ್ ಜೀಪ್ ಪಲ್ಟಿಯಾಗಿ 15 ಮಂದಿ ಗಾಯಗೊಂಡಿದ್ದು ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಕೋಳೂರು ಗ್ರಾಮದ ಆಲಮಟ್ಟಿ ಎಡದಂಡೆ ಕಾಲುವೆಯ ಹತ್ತಿರ ನಡೆದಿದೆ.
ಮುದ್ದೇಬಿಹಾಳದ ಅನೀ ವಡ್ಡರ, ಮುದ್ನಾಳದ ವಿಠ್ಠಲ ನಾವಿ, ಮುಧೋಳದ ಮಲ್ಲಿಕಾರ್ಜುನ ಕುಂಬಾರ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ವೀರೇಶ ಕುಂಬಾರ, ಹುಲಗಪ್ಪ ಮಾದರ, ಆನಂದ ಹಿರೇಕುರುಬರ, ವೀರಣ್ಣ ಹೆಬ್ಬಾಳ, ಮುತ್ತು ಹಿರೇಮಠ, ಮಹ್ಮದ್ ಲಾಹೋರಿ, ಪ್ರಶಾಂತ ಕಮತಗಿ, ಮನೋಜ ಪತ್ರಿಮಠ, ಬಸವರಾಜ ಬಿರಾದಾರ, ವಿಠ್ಠಲ ಗೋಕಾಕ, ಕಾರ್ಖಾನೆಯ ಆಡಳಿತ ವಿಭಾಗದಲ್ಲಿ ಕ್ಲರ್ಕ್ ಆಗಿರುವ ಮುದ್ದೇಬಿಹಾಳ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಶೋಬಾ ಶಳ್ಳಗಿ ಗಾಯಗೊಂಡವರಾಗಿದ್ದಾರೆ.
ಇವರೆಲ್ಲರೂ ಮುದ್ದೇಬಿಹಾಳ, ಚಲಮಿ, ಯರಗಲ್ಲ. ಮುಧೋಳಕ್ಕೆ ಸೇರಿದವರಾಗಿದ್ದಾರೆ.
ಗಾಯಾಳುಗಳಿಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಡಾ. ಪರಶುರಾಮ ವಡ್ಡರ ನೇತೃತ್ವದ ವೈದ್ಯಕೀಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದರು.
ಜೀಪ್ ಪಲ್ಟಿ ಆಗಲು ನಿಖರ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಖಾನೆಯ ಆಡಳಿತ ಮಂಡಳಿಯವರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು ತಕ್ಷಣವೇ ಎಲ್ಲರಿಗೂ ಚಿಕಿತ್ಸೆ ಕೊಡಿಸಲು ಕ್ರಮ ಕೈಕೊಂಡಿದ್ದು ಅಲ್ಲದೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಾದವರ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಕೊಂಡು ಮಾನವೀಯ ನೆರವು ನೀಡಿದ್ದಾರೆ.