ಸೈದಾಪುರ: ನಿಂತಿದ್ದ ಲಾರಿಗೆ ಕ್ರೂಸರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೀದರ-ಗುತ್ತಿ ರಾಷ್ಟ್ರೀಯ ಹೆದ್ದಾರಿ 150ರ ಬಳಿಚಕ್ರ ಗ್ರಾಮದಲ್ಲಿ ನಡೆದಿದೆ.
ದುರ್ಘಟನೆಯಲ್ಲಿ ರಮಿಜಾಬಿ (54), ಮುನೀರ್ ಅಹ್ಮದ್ (50), ನ್ಯಾಮತಾಉಲ್ಲಾ(40), ಮುದ್ದಶೀರ್ (12), ಸುಮಯಾ (12) ಮೃತಪಟ್ಟಿದ್ದಾರೆ. ಉಳಿದ 13 ಜನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರೆಯ ಆಂಧ್ರದ ನಂದ್ಯಾಳ ಜಿಲ್ಲೆಯ ಬಂಡಿ ಆತ್ಮಕೂರು ಹಾಗೂ ವೆಲಗೊಡ ಗ್ರಾಮದಿಂದ ಕಲಬುರಗಿಯಲ್ಲಿ ನಡೆಯುತ್ತಿರುವ ಖಾಜಾ ಬಂದೇನವಾಜ ದರ್ಗಾದ ಉರೂಸ್ ಜಾತ್ರೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ವೆಲಗೂಡ ಗ್ರಾಮದ ರಮಿಜಾಬಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಸೇರಿ ಕ್ರೂಸರ್ ವಾಹನದಲ್ಲಿ ಸುಮಾರು 18 ಜನರಿದ್ದರು. ನಸುಕಿನ ಜಾವ ಮೂರು ಗಂಟೆ ಸುಮಾರಿಗೆ ಬಳಿಚಕ್ರ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನವು ಢಿಕ್ಕಿ ಹೊಡೆದಿದೆ. ಕ್ರೂಸರ್ ಚಾಲಕ ನಿದ್ದೆ ಮಂಪರಿನಲ್ಲಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.