Advertisement

9 ವರ್ಷಗಳಲ್ಲೇ ಗರಿಷ್ಠಕ್ಕೆ ಕಚ್ಚಾ ತೈಲ ದರ

09:32 PM Mar 03, 2022 | Team Udayavani |

ಮಾಸ್ಕೋ/ನವದೆಹಲಿ: ನಿರ್ಬಂಧದ ಸುಳಿಗೆ ಸಿಲುಕುವ ಭಯದಿಂದ ರಷ್ಯಾದ ತೈಲ ಖರೀದಿಸಲು ಖರೀದಿದಾರರು ಹಿಂದೇಟು ಹಾಕುತ್ತಿರುವುದು ಮತ್ತು ಶಿಪ್ಪಿಂಗ್‌ ಸಮಸ್ಯೆಯಿಂದಾಗಿ ಬ್ರೆಂಟ್‌ ಕಚ್ಚಾ ತೈಲದ ದರ ಗುರುವಾರ ಬ್ಯಾರೆಲ್‌ಗೆ ಬರೋಬ್ಬರಿ 120 ಡಾಲರ್‌ ಆಗಿದೆ. ಜಾಗತಿಕ ಕಚ್ಚಾ ತೈಲದ ದರ ಈ ಮಟ್ಟದ ಏರಿಕೆ ಕಂಡಿರುವುದು ಕಳೆದ 9 ವರ್ಷಗಳಲ್ಲಿ ಇದೇ ಮೊದಲು.

Advertisement

ಕಳೆದ 30 ದಿನಗಳಲ್ಲಿ ಬ್ರೆಂಟ್‌ ದರ ಶೇ.37ರಷ್ಟು ಏರಿಕೆ ಕಂಡಿದೆ. ಇನ್ನು, ಯುಎಸ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಯೇಟ್‌ ಕಚ್ಚಾ ತೈಲ ದರ 2008ರ ಬಳಿಕ ಇದೇ ಮೊದಲ ಬಾರಿಗೆ ಬ್ಯಾರೆಲ್‌ಗೆ 116,57 ಡಾಲರ್‌ ಆಗಿದೆ. ಕಚ್ಚಾ ತೈಲ ರಫ್ತು ವಿಚಾರದಲ್ಲಿ ರಷ್ಯಾವು ಸೌದಿ ಅರೇಬಿಯಾದೊಂದಿಗೆ ಪೈಪೋಟಿಗಿಳಿದಿದ್ದು, ಅತಿದೊಡ್ಡ ಕಚ್ಚಾ ತೈಲ ರಫ್ತು ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಲು ಪ್ರಯತ್ನಿಸುತ್ತಿದೆ. ದಿನಕ್ಕೆ 70 ಲಕ್ಷ ಬ್ಯಾರೆಲ್‌ ತೈಲವನ್ನು ರಷ್ಯಾ ರಫ್ತು ಮಾಡುತ್ತಿದ್ದು, ಈ ಪೈಕಿ ಅರ್ಧದಷ್ಟು ತೈಲ ಯುರೋಪ್‌ಗೆ ರವಾನೆಯಾಗುತ್ತದೆ.

ಸೆನ್ಸೆಕ್ಸ್‌ಗೆ ತಟ್ಟಿದ ತೈಲ ದರ ಬಿಸಿ :

ರಷ್ಯಾ-ಉಕ್ರೇನ್‌ ಯುದ್ಧದ ನಡುವೆಯೇ ತೈಲ ದರವು ಗಗನಮುಖೀಯಾಗುತ್ತಿರುವುದು ಮುಂಬೈ ಷೇರುಪೇಟೆಯ ಮೇಲೆ ಕರಾಳ ಛಾಯೆ ಮೂಡಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರಹರಿವು, ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆಯಿಂದ ಆತಂಕಕ್ಕೀಡಾದ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ. ಪರಿಣಾಮ, ಸೆನ್ಸೆಕ್ಸ್‌ 366.22 ಅಂಕ ಕುಸಿದು, ದಿನಾಂತ್ಯಕ್ಕೆ 55,102ಕ್ಕೆ ತಲುಪಿದೆ. ನಿಫ್ಟಿ 107.90 ಅಂಕಗಳ ಕುಸಿತ ದಾಖಲಿಸಿ, 16,498ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಏರಿಕೆಯ ಹಾದಿಯಲ್ಲಿ ಚಿನ್ನ :

Advertisement

ಯುದ್ಧ ಆರಂಭವಾದಾಗಿನಿಂದಲೂ ಚಿನ್ನದ ದರವು ಏರಿಕೆಯ ಹಾದಿಯಲ್ಲೇ ಮುಂದುವರಿದಿದೆ. ಗುರುವಾರ ದೆಹಲಿ ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ದರ 271 ರೂ. ಹೆಚ್ಚಳವಾಗಿ, 10 ಗ್ರಾಂಗೆ 51,670ಗೆ ಏರಿದೆ. ಬೆಳ್ಳಿ ದರವೂ 818 ರೂ. ಏರಿಕೆಯಾಗಿ, ಕೆಜಿಗೆ 68,425 ರೂ. ಆಗಿದೆ.

ಅಲ್ಯುಮಿನಿಯಂ ಸಾರ್ವಕಾಲಿಕ ದಾಖಲೆ :

ರಷ್ಯಾ ಮೇಲಿನ ನಿರ್ಬಂಧದ ಪರಿಣಾಮವೆಂಬಂತೆ, ಅಲ್ಯುಮಿನಿಯಂ ದರವು ಗುರುವಾರ ಸಾರ್ವಕಾಲಿಕ ದಾಖಲೆ ಬರೆದಿದ್ದರೆ, ನಿಕ್ಕಲ್‌ ದರ 11 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ. ಲಂಡನ್‌ ಲೋಹ ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂ ದರವು ಶೇ.3ರಷ್ಟು ಏರಿಕೆಯಾಗಿದ್ದು, ಟನ್‌ಗೆ 2.80 ಲಕ್ಷ ರೂ. (3,691.50 ಡಾಲರ್‌) ಆಗಿದೆ. ಎಲ್‌ಎಂಇ ನಿಕ್ಕಲ್‌ ದರ ಶೇ.6.1ರಷ್ಟು ಏರಿಕೆಯಾಗಿ, ಟನ್‌ಗೆ 20.86 ಲಕ್ಷ ರೂ. (27,470 ಡಾಲರ್‌) ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next