ಸುರತ್ಕಲ್: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿದ್ದು ಭಾರತ ಇದೀಗ ಎಂಆರ್‌ಪಿಎಲ್, ಬಿಪಿಸಿಎಲ್, ಐಒಸಿಎಲ್,ಮುಂತಾದ ಕಂಪೆನಿಗಳ ಮೂಲಕ ಖರೀದಿಸಿ ಮಂಗಳೂರಿನ ತೈಲಾಗಾರ ಮತ್ತು ಪೆಟ್ರೋ ಕೆಮಿಕಲ್ಸ್ (ಐಎಸ್‌ಪಿಆರ್‌ಎಲ್) ಅಧೀನದಲ್ಲಿರುವ ಭೂಗತ ಕೇಂದ್ರ ಗಳಲ್ಲಿ ಸಂಗ್ರಹದಲ್ಲಿ ತೊಡಗಿದೆ.
3 ಮಿಲಿಯ ಬ್ಯಾರಲ್‌ನಷ್ಟು ಕಚ್ಚಾ ತೈಲ ಆಮದಾಗಿದ್ದು ಎನ್‌ಎಂಪಿಟಿಯಿಂದ 17 ಕಿ.ಮೀ. ದೂರದಲ್ಲಿ ಸಾಗರ ಮಧ್ಯದಲ್ಲಿರುವ ಸಿಂಗಲ್ ಪಾಯಿಂಟ್ ಮೂರಿಂಗ್(ಎಸ್‌ಪಿಎಂ) ವ್ಯವಸ್ಥೆ ಮೂಲಕ ಮಂಗಳೂರಿನ ಪೆರ್ಮುದೆ,ಪಾದೂರಿನಲ್ಲಿರುವ ಭೂಗತ
ಸಂಗ್ರಹಾಗಾರಗಳಲ್ಲಿ, ತಮಿಳು ನಾಡಿನ ವಿಶಾಖಪಟ್ಟಣದಲ್ಲಿರುವ ಭೂಗತ ಸಂಗ್ರಹ ಕೇಂದ್ರದಲ್ಲಿಯೂ ತುಂಬಿಸಿಡ ಲಾಗುತ್ತಿದೆ.
ಪೆರ್ಮುದೆಯಲ್ಲಿ 1.5 ಮಿಲಿಯ ಮೆಟ್ರಿಕ್ ಟನ್ ಮತ್ತು ಪಾದೂರಿನಲ್ಲಿ 2.5 ಮಿ.ಮೆ. ಟನ್ ಕಚ್ಚಾ ತೈಲ ಸಂಗ್ರಹ ಮಾಡಬಹುದಾಗಿದೆ.
ಮೇ ವರೆಗೆ ತೈಲ ಟ್ಯಾಂಕರ್ ಮೂಲಕ ಭಾರತಕ್ಕೆ ಸೌದಿ ಅರೇಬಿಯಾ, ಇರಾಕ್ ಸಹಿತ ಮಧ್ಯಪ್ರಾಚ್ಯ ದೇಶಗಳಿಂದ ಭಾರೀ ಪ್ರಮಾಣದಲ್ಲಿ ಕಚ್ಚಾ ತೈಲ ಬರಲಿದೆ. ದರ ಇಳಿಕೆಯ ಲಾಭ ಮತ್ತು ಭವಿಷ್ಯದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆಯಾಗದಂತೆ ಸರಕಾರ ಈ ಹೆಜ್ಜೆಯನ್ನಿಟ್ಟಿದೆ. ಎಂಆರ್‌ಪಿಎಲ್ ಸಂಸ್ಥೆಯು ಇದರಲ್ಲಿ ಪ್ರಮುಖ ಪಾತ್ರವಹಿಸಿದೆ.
ಎಂಆರ್‌ಪಿಎಲ್ 3 ಮಿಲಿಯ ಬ್ಯಾರೆಲ್ ಕಚ್ಚಾ ತೈಲ ಆಮದು ಮಾಡಿಕೊಂಡು ಸಂಗ್ರಹ ಮಾಡುತ್ತಿದೆ. ಇಂಧನ ಪೂರೈಕೆಯಲ್ಲಿ ಕೊರತೆಯಾಗದಂತೆ ಎಂಆರ್‌ಪಿಎಲ್ ಶ್ರಮಿಸುತ್ತಿದೆ. ಶೇ. 50ರಷ್ಟು ಸಾಮರ್ಥ್ಯದಲ್ಲಿ ಘಟಕ ಕಾರ್ಯನಿರ್ವಹಿಸುತ್ತಿದೆ.
-ಎಂ.ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್