Advertisement

ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕಚ್ಚಾತೈಲ!

11:54 AM Jul 24, 2018 | Team Udayavani |

ಬೆಂಗಳೂರು: ಪ್ಲಾಸ್ಟಿಕ್‌ನಿಂದ ಕಚ್ಚಾತೈಲ ತಯಾರಿಕಾ ಘಟಕ ಸ್ಥಾಪಿಸಿದ ಏಷ್ಯಾದ ಮೊದಲ ಪಾಲಿಕೆ ಎಂಬ ಹೆಗ್ಗಳಿಕೆ ಪಡೆಯಲು ಮುಂದಾಗಿರುವ ಬಿಬಿಎಂಪಿ, ಆ ನಿಟ್ಟಿನಲ್ಲಿ ಈಗಾಗಲೇ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Advertisement

ನಗರದಲ್ಲಿನ ತ್ಯಾಜ್ಯ ವಿಲೇವಾರಿ, ವಿಂಗಡಣೆ ಹಾಗೂ ಸಂಸ್ಕರಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ಗಳನ್ನು ಕಚ್ಚಾತೈಲವನ್ನಾಗಿಸುವ ಘಟಕ ನಿರ್ಮಿಸಲು ಯೋಜನೆ ರೂಪಿಸಿದೆ.

ಪಾಲಿಕೆಯ ಒಣತ್ಯಾಜ್ಯ ಸಂಗ್ರಹಣಾ ಘಟಕಗಳು, ತ್ಯಾಜ್ಯ ಸಂಸ್ಕರಣಾ ಘಟಕಗಳು ಹಾಗೂ ಇತರೆ ಮೂಲಗಳಿಂದ ಸಂಗ್ರಹವಾಗುವ ಪ್ಲಾಸ್ಟಿಕ್‌ಗಳನ್ನು “ಪಾಲಿಮರ್‌ ಎನರ್ಜಿ ಟೆಕ್ನಾಲಜಿ’ ಮೂಲಕ ಕಚ್ಚಾತೈಲವಾಗಿ ಪರಿವರ್ತಿಸುವ ಘಟಕ ಸ್ಥಾಪನೆಗೆ ಎಂ.ಕೆ.ಆರೋಮೆಟಿಕ್ಸ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ.

ಎಂ.ಕೆ.ಆರೋಮೆಟಿಕ್ಸ್‌ ಲಿಮಿಟೆಡ್‌ ಸಂಸ್ಥೆ ಈಗಾಗಲೇ ದೆಹಲಿ ಹಾಗೂ ಚೆನ್ನೈನಲ್ಲಿ ಖಾಸಗಿಯಾಗಿ ಘಟಕಗಳನ್ನು ಆರಂಭಿಸಿದ್ದು, ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯ ಪ್ರಸ್ತಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯ ಸರ್ಕಾರ, ನಗರದಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ನೀಡಿದೆ.  ಪಾಲಿಕೆಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಪಾಲಿಕೆ ಸಮರ್ಥನೆ: ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಗೊಬ್ಬರವಾಗಿ ತಯಾರಿಸುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಏಳು ಕಡೆಗಳಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಗೊಬ್ಬರ ತಯಾರಿಸುವ ಪ್ರಕ್ರಿಯೆಗೆ ಪ್ಲಾಸ್ಟಿಕ್‌ ಉತ್ಪನ್ನಗಳು ಮಾರಕವಾಗಿವೆ.

Advertisement

ಆ ಹಿನ್ನೆಲೆಯಲ್ಲಿ ಎಂ.ಕೆ.ಆರೋಮೆಟಿಕ್ಸ್‌ ಲಿಮಿಟೆಡ್‌ ಸಂಸ್ಥೆ ಮೂಲಕ ನಿತ್ಯ 40 ಟನ್‌ ಪ್ಲಾಸ್ಟಿಕ್‌ಗಳನ್ನು ಕಚ್ಚಾತೈಲವಾಗಿಸುವ ಘಟಕ ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ. ಇದರಿಂದ ತ್ಯಾಜ್ಯ ಘಟಕಗಳಲ್ಲಿ ಪ್ಲಾಸ್ಟಿಕ್‌ ಸಮಸ್ಯೆ ಉದ್ಭವಿಸುವುದಿಲ್ಲ ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.

ಐದು ಎಕರೆ ಜಾಗ ಮಂಜೂರು: ಒಪ್ಪಂದದ ಪ್ರಕಾರ ಎಂ.ಕೆ.ಆರೋಮೆಟಿಕ್ಸ್‌ ಸಂಸ್ಥೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಐದು ಎಕರೆ ಜಾಗ ನೀಡಲು ಪಾಲಿಕೆ ಒಪ್ಪಿದೆ. ಅದರಂತೆ ಸಂಸ್ಥೆ 100 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಿಸಿ ನಿರ್ವಹಿಸಲಿದ್ದು, ಘಟಕದಲ್ಲಿ ಉತ್ಪಾದನೆಯಾಗುವ ಕಚ್ಚಾತೈಲವನ್ನು ಸಂಸ್ಥೆ ಮಾರಾಟ ಮಾಡಿಕೊಳ್ಳಲಿದೆ ಎನ್ನಲಾಗಿದೆ. 

ಕಚ್ಚಾತೈಲದ ಅನುಕೂಲತೆ: ಕಚ್ಚಾತೈಲವನ್ನು ಡಾಂಬರ್‌ನೊಂದಿಗೆ ಮಿಶ್ರಣ ಮಾಡಿ ರಸ್ತೆಗಳಿಗೆ ಡಾಂಬರೀಕರಣ ಮಾಡುವುದರಿಂದ ರಸ್ತೆಗಳು ಸಾಮಾನ್ಯಕ್ಕಿಂತ ಮೂರು ಪಟ್ಟು ಗುಣಮಟ್ಟದಿಂದ ಕೂಡಿರುತ್ತವೆ. ಜತೆಗೆ ಜನರೇಟರ್‌ ಹಾಗೂ ಹಲವು ಕಂಪೆನಿಗಳಲ್ಲಿ ಕಚ್ಚಾತೈಲವನ್ನು ಬಳಸಲಾಗುತ್ತದೆ.

1ಟನ್‌ಗೆ 800 ಲೀಟರ್‌ ತೈಲ: ನಗರದಲ್ಲಿ ನಿತ್ಯ 500 ಟನ್‌ನಷ್ಟು ಪ್ಲಾಸ್ಟಿಕ್‌ ಉತ್ಪನ್ನಗಳು ಪಾಲಿಕೆಗೆ ವಿವಿಧ ಮೂಲಗಗಳಿಂದ ಸಂಗ್ರಹವಾಗುತ್ತವೆ. ಮೊದಲ ಹಂತದಲ್ಲಿ 40 ಟನ್‌ ಸಾಮರ್ಥಯದ ಘಟಕ ಸ್ಥಾಪಿಸಲು ಪಾಲಿಕೆ ನಿರ್ಧರಿಸಿದ್ದು, ಪಾಲಿಮರ್‌ ಎನರ್ಜಿ ಟೆಕ್ನಾಲಜಿ ಮೂಲಕ ಒಂದು ಟನ್‌ ಪ್ಲಾಸ್ಟಿಕ್‌ನಿಂದ 800 ಲೀಟರ್‌ ಕಚ್ಚಾತೈಲ ಉತ್ಪಾದಿಸಬಹುದಾಗಿದ್ದು, ನಿತ್ಯ 40 ಟನ್‌ ತ್ಯಾಜ್ಯವನ್ನು ಕಚ್ಚಾತೈಲವಾಗಿ ಪರಿವರ್ತಿಸಬಹುದಾಗಿದೆ. 

ಮೊದಲು ನಿತ್ಯ 10 ಟನ್‌ ಪ್ಲಾಸ್ಟಿಕ್‌ ಸಂಸ್ಕರಣೆಗೆ ಒಪ್ಪಂದವಾಗಿತ್ತು. ಪ್ಲಾಸ್ಟಿಕ್‌ ಉತ್ಪಾದನೆ ಪ್ರಮಾಣ ಹೆಚ್ಚಾಗಿರುವುದರಿಂದ 40 ಟನ್‌ ಸಂಸ್ಕರಣೆ ಮಾಡುವಂತೆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. 
-ಸಫ್ರಾಜ್‌ ಖಾನ್‌, ಜಂಟಿ ಆಯುಕ್ತ, ಘನತ್ಯಾಜ್ಯ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next