Advertisement

ಗಡಿನಾಡಿನಲ್ಲಿ ಕಾರ್ಟೂನ್‌ ಕಚಗುಳಿ

12:30 AM Mar 08, 2019 | Team Udayavani |

ಉಪ್ಪಳದ ಪೈವಳಿಕೆ ಸಮೀಪ ಬಾಯಾರಿಕಟ್ಟೆಯಲ್ಲಿ  ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆ ಮತ್ತು ಕಾರ್ಟೂನು ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕವನ ವಾಚನ ಮತ್ತು ವ್ಯಂಗ್ಯಚಿತ್ರ ರಚನೆಯನ್ನು ಸವಿಯಲು ಸುಮಾರು 80 ಮಂದಿ ಸೇರಿದ್ದರು. ವೆಂಕಟ್‌ ಭಟ್‌ ಎಡನೀರು, ಬಾಲ ಮಧುರ ಕಾನನ ಮತ್ತು ಪ್ರೊ|ಪಿ. ಎನ್‌. ಮೂಡಿತ್ತಾಯರವರ 100ಕ್ಕೂ ಅಧಿಕ ಕಾರ್ಟೂನ್‌ಗಳ ಪ್ರದರ್ಶನ ಏರ್ಪಡಿಸಿದ್ದು, ಮಕ್ಕಳಿಗೆ ಕಾರ್ಟೂನ್‌ ಪ್ರಾತ್ಯಕ್ಷಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿತ್ತು. ಬಾಲ ಅವರು ಹಿಂದೆ ರಚಿಸಿದ ದೊಡ್ಡ ಗಾತ್ರದ 25 ಕ್ಯಾರಿಕೇಚರ್‌ಗಳು ಗಮನ ಸೆಳೆದುವು. 

Advertisement

ಸುಲಲಿತ ಗೆರೆಗಳಲ್ಲೇ ನಗು ತರಿಸುವ ಖ್ಯಾತ ವ್ಯಂಗ್ಯ ಚಿತ್ರಕಾರ ಹರಿಣಿ ಯವರು ಆರಂಭದಲ್ಲಿ ಬಿಡಿಸಿದ ಸಂಘಟಕರ ಕ್ಯಾರಿಕೇಚರ್‌ ಉತ್ಸಾಹದ ಸಂಚಲನ ಮೂಡಿಸಿತು. ನಂತರ ಅವರು ಕಣ್ಣೀರಿನ ಕಾರಂಜಿ ಸಿಡಿಸುವ ಕುಮಾರಸ್ವಾಮಿ, ಸಿಟ್ಟಿನ ಮುಖಮುದ್ರೆಯ ಬಿ. ಎಸ್‌. ಯಡಿಯೂರಪ್ಪ, ಪ್ರೇಕ್ಷಕರೊಬ್ಬರ ಅಪೇಕ್ಷೆ ಮೇರೆಗೆ ವಾಜಪೇಯಿ ಅವರುಗಳನ್ನು ರಚಿಸುತ್ತಿದ್ದಂತೆ ಮಕ್ಕಳು ಕೂಡ ಗುರುತು ಹಚ್ಚಿ ಹೆಸರು ಹೇಳುತ್ತಿದ್ದದ್ದು ಹರಿಣಿಯವರ ಕೈಚಳಕಕ್ಕೆ ಸಂದ ಯಶಸ್ಸು. ಪ್ರೇಕ್ಷಕರಲ್ಲಿ ಇಬ್ಬರು ಕವಯಿತ್ರಿ ಗೆಳತಿಯರನ್ನು ಜತೆಯಾಗಿ ಚಿತ್ರಿಸಿದರು. ವೆಂಕಟ್‌ ಭಟ್‌ ಮತ್ತು ಬಾಲ ಅವರು ಮಕ್ಕಳಿಗೂ ಬರೆಯಲು ಅನುಕೂಲವಾಗುವಂತೆ ಕೆಲವು ಕಾರ್ಟೂನ್‌ಗಳನ್ನು ಬರೆದರು. ಜೀವನ್‌ ಅವರು ಕಾರ್ಟೂನನ್ನು ಒಗಟಾಗಿ ಚಿತ್ರಿಸಿ ಮಕ್ಕಳು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ನಂತರ ವ್ಯಂಗ್ಯಚಿತ್ರಗಳ ಮೂಲಭೂತ ವಿಷಯಗಳನ್ನು ತಿಳಿ ಹೇಳುತ್ತಾ ವಿವಿಧ ಮುಖಬಾವಗಳನ್ನು ಬರೆಯಿಸಿದರು. ಒಟ್ಟಾರೆ 3ಗಂಟೆಗಳು ರಂಜಿಸಿದ ಅಪರೂಪದ ಕಾರ್ಟೂನ್‌ ಕಾರ್ಯಕ್ರಮ. ಕೊನೆಗೆ ಹಿರಿಯರು ಕಿರಿಯರು ಕಾರ್ಟೂನ್‌ ಬರೆಯುತ್ತಿದ್ದದ್ದನ್ನು ಕಂಡಾಗ ಇದು ವ್ಯಂಗ್ಯಚಿತ್ರಕಲೆಯ ಪ್ರಭಾವ ಎಂಬುದು ಸ್ಪಷ್ಟವಾಯಿತು. 

ಜೀವನ್‌ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next