ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸಿಆರ್ ಪಿಎಫ್ ವಿಂಗ್ ಕಮಾಂಡೋ ಹಾಗೂ ಪೊಲೀಸರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಯೋಧ ಸಚಿನ್ ಸಾವಂತಗೆ ಮಂಗಳವಾರ ಜಾಮೀನು ಮಂಜೂರಾಗಿದ್ದು, ಇನ್ನು ಕೆಲವೇ ಗಂಟೆಯಲ್ಲಿ ಬಿಡುಗಡೆಯಾಗಲಿದೆ.
ಇಬ್ಬರು ಪೊಲೀಸ್ ಪೇದೆಗಳ ಜೊತೆ ನಡೆದ ಗಲಾಟೆಗೆ ಸಂಬಧಿಸಿದಂತೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಸಿಆರ್ ಪಿಎಫ್ ಯೋಧನಿಗೆ ಚಿಕ್ಕೋಡಿ 1ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
ಜಾಮೀನು ಆದೇಶದೊಂದಿಗೆ ವಕೀಲರು ಚಿಕ್ಕೋಡಿಯಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಪ್ರಯಾಣ ಬೆಳೆಸಿದ್ದಾರೆ ಒಂದೂವರೆ ತಾಸಿನೊಳಗೆ ಯೋಧನ ಬಿಡುಗಡೆಯಾಗಲಿದೆ ಎಂದು ಸಿಆರ್ ಪಿಎಫ್ ಅಧಿಕಾರಿಗಳು ಉದಯವಾಣಿಗೆ ತಿಳಿಸಿದರು.
ಕಮಾಂಡೋ ವಿರುದ್ಧ ಐಪಿಸಿ ಸೆಕ್ಷನ್ 353, 323 ಮತ್ತು 504 ಹಾಗೂ ಎಪಿಡೆಮಿಕ್ ಡಿಸೀಜಿಸ್ ಆಕ್ಟ್ 1987ರ ಸೆಕ್ಷನ್ 3ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕಾಗಿ ಇಬ್ಬರು ಪೇದೆ – ಸಿಆರ್‌ಪಿಎಫ್ ಯೋಧನ ಮಧ್ಯೆ ಗಲಾಟೆ ನಡೆದಿತ್ತು. ಕರ್ತವ್ಯನಿರತ ಪೇದೆ ಮೇಲೆ ಹಲ್ಲೆ ಆರೋಪದಡಿ ಸಿಆರ್‌ಪಿಎಫ್ ಯೋಧನನನ್ನು ಬಂಧಿಸಲಾಗಿತ್ತು. ಏಪ್ರಿಲ್ 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ಈ ಘಟನೆ ನಡೆದಿತ್ತು. ಯೋಧನಿಗೆ ಕೈಕೊಳ ಹಾಕಿ ಕೂರಿಸಿದ್ದ ಫೋಟೊ ವೈರಲ್ ಆಗಿ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.