ನವದೆಹಲಿ:ಸಿಆರ್ ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ಯ ಸಬ್ ಇನ್ಸ್ ಪೆಕ್ಟರ್ ರೊಬ್ಬರು ತನ್ನ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಲೋಧಿ ಎಸ್ಟೇಟ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ಲೋಧಿ ಎಸ್ಟೇಟ್ ನ ಬಂಗ್ಲೆಯಲ್ಲಿ ಶುಕ್ರವಾರ ರಾತ್ರಿ 10.30ರ ಹೊತ್ತಿಗೆ ಗುಂಡಿನ ಶಬ್ದ ಕೇಳಿ ಅರೆಸೇನಾಪಡೆಯ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು ಎಂದು ವರದಿ ತಿಳಿಸಿದೆ.
ಅಧಿಕಾರಿಗಳು ನೀಡಿರುವ ಹೇಳಿಕೆ ಪ್ರಕಾರ,ಸಬ್ ಇನ್ಸ್ ಪೆಕ್ಟರ್ ಕರ್ನೈಲ್ ಸಿಂಗ್ (55ವರ್ಷ), ಸಹೋದ್ಯೋಗಿ ಹಿರಿಯ ಸಬ್ ಇನ್ಸ್ ಪೆಕ್ಟರ್ ದಶ್ ರಥ್ ಸಿಂಗ್ (56ವರ್ಷ) ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಎಸ್ ಐ ಕರ್ನೈಲ್ ಸಿಂಗ್ ಗುಂಡು ಹಾರಿಸಿ ಹಿರಿಯ ಅಧಿಕಾರಿ ದಶ್ ರಥ್ ಅವರನ್ನು ಕೊಂದಿದ್ದು, ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕರ್ನೈಲ್ ಸಿಂಗ್ ಜಮ್ಮು-ಕಾಶ್ಮೀರದ ಉಧಾಂಪುರ್ ಮೂಲದವರು, ದಶ್ ರಥ್ ಸಿಂಗ್ ಹರ್ಯಾಣದ ರೋಹ್ಟಕ್ ಮೂಲದವರಾಗಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.