ಮಂಡ್ಯ: ವಂದೇಮಾತರಂ, ಬೋಲೋ ಭಾರತ್ ಮಾತಾ ಕೀ ಜೈ, ಗುಡಿಗೆರೆ ಗುರು ಅಮರರಾಗಲಿ, ಗುರು ಅಮರ್ ರಹೇ ಘೋಷಣೆಗಳು…, ಲಕ್ಷಾಂತರ ಮಂದಿಯ ಕಣ್ಣೀರಧಾರೆಯ ನಡುವೆ ದೇಶಕ್ಕಾಗಿ ಪ್ರಾಣತ್ಯಜಿಸಿದ ಹುತಾತ್ಮ ಯೋಧ, ರಾಜ್ಯದ ಹೆಮ್ಮೆಯ ಪುತ್ರ ಎಚ್.ಗುರು ಪಂಚಭೂತಗಳಲ್ಲಿ ಲೀನವಾದರು.
ಗುರು ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ರಾತ್ರಿ ಮದ್ದೂರು ತಾಲೂಕು ಮೆಳ್ಳಹಳ್ಳಿಯಲ್ಲಿ ಜರುಗಿತು.
ಮಳವಳ್ಳಿ-ಮದ್ದೂರು ಹೆದ್ದಾರಿ ರಸ್ತೆ ಪಕ್ಕದಲ್ಲಿರುವ 10 ಗುಂಟೆ ಸರ್ಕಾರಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಗುರುವಿನ ಪಾರ್ಥಿವ ಶರೀರಕ್ಕೆ ಮಡಿವಾಳ ಸಂಪ್ರದಾಯದ ವಿಧಿ-ವಿಧಾನಗಳನ್ನು ನೆರವೇರಿಸಿದ ಬಳಿಕ ಸೇನೆ ಮತ್ತು ಸರ್ಕಾರಿ ಗೌರವ ಸಮರ್ಪಿಸಲಾಯಿತು. ತರುವಾಯ ಚಿತೆಗೆ ಗುರು ಸೋದರ ಮಧು ಅಗ್ನಿ ಸ್ಪರ್ಶ ಮಾಡಿದರು.
ಗ್ರಾಮದಲ್ಲಿ ಮೆರವಣಿಗೆ: ಬೆಂಗಳೂರಿನಿಂದ ಸೇನೆಯ ವಾಹನದಲ್ಲಿ ವೀರ ಯೋಧ ಗುರು ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಗುಡಿಗೆರೆ ಕಾಲೋನಿಗೆ ಸಂಜೆ 7ರ ವೇಳೆಗೆ ತರಲಾಯಿತು. ಹತ್ತು ನಿಮಿಷಗಳ ಕಾಲ ಮನೆಯ ಬಳಿ ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮೆಳ್ಳಹಳ್ಳಿವರೆಗೆ ಮೆರವಣಿಗೆ ಯಲ್ಲಿ ಕೊಂಡೊಯ್ಯಲಾಯಿತು.
ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸರು ವೀರ ಯೋಧನಿಗೆ ಗೌರವ ಸಲ್ಲಿಸಿದರೆ, ಪೊಲೀಸ್ ಬ್ಯಾಂಡ್ ತಂಡವು ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿತು.
ಸಿಎಂ ಕುಮಾರಸ್ವಾಮಿ ಗುರು ಪತ್ನಿ ಕಲಾವತಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿ, ಸ್ಥಳದಲ್ಲೇ 25 ಲಕ್ಷ ರೂ.ಗಳ ಚೆಕ್ ಅನ್ನು ವಿತರಣೆ ಮಾಡಿದರು.
ಅಂತ್ಯಸಂಸ್ಕಾರದಲ್ಲಿ ಗಣ್ಯರ ಭಾಗಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಚಿವರಾದ ಸಾ.ರಾ.ಮಹೇಶ್, ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಸಚಿವ ಎಸ್.ಎಂ. ಕೃಷ್ಣ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಹಾಗೂ ಶಾಸಕರು ಸೇರಿ ಗಣ್ಯರು ಭಾಗಿಯಾಗಿದ್ದರು.