ಶ್ರೀನಗರ್: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಂಬಾಲ್ ನಲ್ಲಿ ಸಿಆರ್ ಪಿಎಫ್ ಕ್ಯಾಂಪ್(ಸಿಆರ್ ಪಿಎಫ್) ಮೇಲೆ ಆತ್ಮಹತ್ಯಾ ದಾಳಿಗೆ ಯತ್ನಿಸಿದ್ದ ನಾಲ್ವರು ಭಯೋತ್ಪಾದಕರನ್ನು ಭಾರತೀಯ ಸೇನಾ ಪಡೆ ಸೋಮವಾರ ಹೊಡೆದುರುಳಿಸಿದೆ.
ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ಹೊಂದಿದ್ದ ಉಗ್ರರು ಸಿಆರ್ ಪಿಎಫ್ ನೆಲೆ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದ ಸಂಚನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿದೆ.
ಇಂದು ಮುಂಜಾನೆ ಉತ್ತರ ಕಾಶ್ಮೀರದ ಸಂಬಾಲ್ ನ ಸಿಆರ್ ಪಿಎಫ್ ನ 45ನೇ ಬೆಟಾಲಿಯನ್ ಕ್ಯಾಂಪ್ ಮೇಲೆ ದಾಳಿಗೆ ಯತ್ನಿಸಿದಾಗ ಯೋಧರು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿತ್ತು.
ಕ್ಯಾಂಪ್ ಒಳಗೆ ಆತ್ಮಹತ್ಯಾ ದಾಳಿಗೆ ಉಗ್ರರು ಯತ್ನಿಸಿದ್ದರು. ಭಾರತೀಯ ಸೇನಾಪಡೆಯ ಭಾರೀ ದಾಳಿಗೆ ನಾಲ್ವರು ಉಗ್ರರು ಸಾವನ್ನಪ್ಪಿದ್ದಾರೆ. ಸಿಎಆರ್ ಪಿಎಫ್ ಯೋಧರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸಿಆರ್ ಪಿಎಫ್ ಡೆಪ್ಯುಟಿ ಜನರಲ್ ಇನ್ಸ್ ಪೆಕ್ಟರ್ ಎಂ.ದಿನಕರನ್ ತಿಳಿಸಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ.
ಉಗ್ರರ ಬಳಿ ಇದ್ದ ಹಲವಾರು ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ಎಕೆ 47, ಒಂದು ಗ್ರೆನೇಡ್ ಲಾಂಚರ್, 12ಕ್ಕೂ ಅಧಿಕ ಗ್ರೆನೇಡ್ಸ್ ಹಾಗೂ ಭಾರೀ ಪ್ರಮಾಣದ ಮದ್ದು, ಗುಂಡು ಸೇರಿರುವುದಾಗಿ ವರದಿ ವಿವರಿಸಿದೆ.