Advertisement

ಕಿರೀಟ ಕಾಯುವ ಕಾಗೆಗಳು!

11:20 AM Jan 05, 2020 | Lakshmi GovindaRaj |

ಇಂಗ್ಲಿಷರ ಪ್ರಕಾರ, ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲಿರುವ ರಾಣಿಯಕಿರೀಟ ಮತ್ತು ಲಂಡನ್‌ ಟವರ್‌ ಅನ್ನು ಕಾವಲು ಮಾಡುತ್ತವಂತೆ. ನಮ್ಮ ಕೊಹಿನೂರ್‌ ಮಣಿ ಇರುವುದೂ ಇದೇ ಟವರ್‌ನ ಒಳಗಿನ ಮ್ಯೂಸಿಯಂನಲ್ಲಿ…

Advertisement

The Ravens
If the Ravens leave the tower
The Kingdom will fall…- ಎನ್ನುವ ನಂಬಿಕೆ ಬ್ರಿಟಿಷ್‌ ರಾಜಮನೆತನದಲ್ಲಿ ಬಹಳ ಹಿಂದಿನಿಂದಲೂ ಪ್ರಸಿದ್ಧಿ.

ಅದು ಟವರ್‌ ಆಫ್ ಲಂಡನ್‌. ಥೇಮ್ಸ್‌ ನದಿಯ ದಡದಲ್ಲಿರುವ, ಶತಮಾನಗಳ ಕತೆ ಹೇಳುವ, ಮೂರು ಅಂತಸ್ತಿನ ಅತ್ಯಂತ ಎತ್ತರದ ಕಟ್ಟಡ. ನಮ್ಮ ಕೊಹಿನೂರು ವಜ್ರದ ಮಣಿಯನ್ನು ಬ್ರಿಟಿಷರು ಹೊತ್ತೂಯ್ದು ಇಟ್ಟಿರುವುದು ಟವರ್‌ನ ಒಳಗಿನ ಮ್ಯೂಸಿಯಂನಲ್ಲಿ. ಟವರ್‌ನ ಸುತ್ತಲೂ ಸರ್ಪಗಾವಲಿದೆ. ಮ್ಯೂಸಿಯಂ ಒಳಗಿರುವ ವಜ್ರಾಭರಣಗಳ ಚಿತ್ರ ತೆಗೆಯುವುದು ನಿಷಿದ್ಧ.

ಈ ಕಟ್ಟಡದ ಸುತ್ತ ನನ್ನ ಕಣ್ಣಿಗೆ ಬಿದ್ದಿದ್ದು, 7 ಕಾಗೆಗಳು! ಇವುಗಳನ್ನು ಟವರ್‌ ಆಫ್ ಲಂಡನ್‌ನ ದಕ್ಷಿಣ ಭಾಗದ ಲಾನ್‌ನಲ್ಲಿ ರಾಜ ಮನೆತನದವರು ಸಾಕಿಕೊಂಡಿದ್ದಾರೆ. ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲೇ ಇರಬೇಕು; ಆ ಜಾಗ ಬಿಟ್ಟು ಬೇರೆಡೆಗೆ ಯಾವುದೇ ಕಾರಣಕ್ಕೂ ಅವು ಹೋಗುವಂತಿಲ್ಲ. ಹಾಗೂ ಹೋದರೆ, ಟವರ್‌ ಆಫ್ ಲಂಡನ್‌ ಕುಸಿದು ಬೀಳುತ್ತೆ, ರಾಜ ಮನೆತನಕ್ಕೆ ಸಮಸ್ಯೆ ಆಗುತ್ತೆ! ಇಂಗ್ಲೆಂಡ್‌ ದೇಶವೂ ಬೀದಿಗೆ ಬರುತ್ತೆ!- ಇದು ಬ್ರಿಟಿಷರೊಳಗೆ ಮನೆಮಾಡಿರುವಂಥ (ಮೂಢ) ನಂಬಿಕೆ!

ರಾಣಿ ಕಿರೀಟಕ್ಕೆ ಕಾವಲು:
ಇಂಗ್ಲಿಷರ ಪ್ರಕಾರ, ಈ ಕಾಗೆಗಳು ಟವರ್‌ ಆಫ್ ಲಂಡನ್‌ನಲ್ಲಿರುವ ಕಿರೀಟ ಮತ್ತು ಲಂಡನ್‌ ಟವರ್‌ ಅನ್ನು ಕಾವಲು ಮಾಡುತ್ತವಂತೆ. ಇಲ್ಲಿ ಕಾಗೆಗಳನ್ನು ನೋಡಿಕೊಳ್ಳಲೆಂದೇ, Raven master ಅನ್ನು ನೇಮಿಸಿದ್ದಾರೆ. ಈ ಕಾಗೆಗಳು ಬಹಳ ಚುರುಕು, ವಿಶೇಷ ಕೌಶಲ, ಬುದ್ಧಿವಂತಿಕೆ ಹೊಂದಿವೆ ಎನ್ನುವುದು ಇಲ್ಲಿನವರ ಮಾತು. ಆಟ ಆಡುವ, ಮಿಮಿಕ್‌ ಮಾಡುವ ಕಲೆಯನ್ನೂ ಹೊಂದಿವೆಯಂತೆ.

ಬಂದ ಪ್ರವಾಸಿಗರಾರೂ ಇವುಗಳಿಗೆ ಆಹಾರ ಹಾಕುವುದು, ಅವುಗಳನ್ನೇ ನೋಡುತ್ತಾ, ಮಾತಿಗಿಳಿಯುವುದು ಮಾಡಬಾರದು ಅಂತಾರೆ ಇಲ್ಲಿನ ಸಿಬ್ಬಂದಿ. ಕಾಗೆಗಳಿಗೆ ಕೋಪ ನೆತ್ತಿಗೇರಿ, ದಾಳಿ ಮಾಡಬಹುದು ಎಂಬ ಕಾರಣಕ್ಕೆ ಅವರು ಹೀಗೆ ಎಚ್ಚರಿಸುತ್ತಾರೆ. ಅಷ್ಟೂ ಕಾಗೆಗಳು, ರೆವೆನ್ಸ್‌ ಮಾಸ್ಟರ್‌ನ ಸೂಚನೆಯನ್ನು ಶ್ರದ್ಧೆಯಿಂದ ಪಾಲಿಸುತ್ತವೆ.

Advertisement

ರೆಕ್ಕೆಗಳಿಗೆ ಕತ್ತರಿ ಹಾಕ್ತಾರೆ…: ನಮ್ಮ ಭಾರತದ ಕಾಗೆಗಳಿಗಿಂತ ಇವು ದಷ್ಟಪುಷ್ಟ. ದಿನಕ್ಕೆ ಎರಡು ಹೊತ್ತು ಇಲಿ, ಮಾಂಸದ ಚೂರು ಹಾಗೂ ರಕ್ತದಲ್ಲಿ ಅದ್ದಿರುವ ಬಿಸ್ಕೇಟ್‌ನ ಆತಿಥ್ಯ ಸಿಗುತ್ತದೆ. ಇವು ಜಾಸ್ತಿ ದೂರ ಹಾರಿ ಹೋಗದಂತೆ ಮಾಸ್ಟರ್‌ ಆಗಾಗ್ಗೆ ರೆಕ್ಕೆಗಳ ಕೆಲವು ಭಾಗವನ್ನು ಕತ್ತರಿಸುತ್ತಾನೆ. ಇಂಗ್ಲೆಂಡಿಗರ ನಂಬಿಕೆಗೆ ಪೂರಕವಾಗಿ, ಇವು ಹೊರ ಹೋಗುವುದು ಕೂಡ ಕಡಿಮೆ. ಇಲ್ಲಿ ಇವುಗಳಿಗೆ ಚೆಂದದ ಗೂಡುಗಳೂ ಇವೆ.

ಟವರ್‌ ಆಫ್ ಲಂಡನ್‌ ಜಾಗದ ಸುತ್ತಮುತ್ತ ಕೂಗುತ್ತಾ, ಕಟ್ಟಡದಿಂದ ಕಟ್ಟಡಕ್ಕೆ ಹಾರಾಡುತ್ತಾ ಇರುತ್ತವೆ. ಇದನ್ನು ನೋಡಿದಾಗ ನನಗೆ ಅನ್ನಿಸಿದ್ದು, ನಂಬಿಕೆ- ಮೂಢನಂಬಿಕೆಗಳಿಂದ ಯಾವ ದೇಶವೂ ಹೊರತಾಗಿಲ್ಲ ಎನ್ನುವುದು. ನಮ್ಮ ಕೊಹಿನೂರು ಮಣಿಯನ್ನು ಅಷ್ಟು ದೂರ ಹೊತ್ತೂಯ್ದು, ಕಾಗೆಗಳ ಕಾವಲಿನೊಳಗೆ ಕೂರಿಸಿದ್ದಾರಲ್ಲ ಎಂಬ ಬೇಸರ ಆಗಿದ್ದೂ ಸುಳ್ಳಲ್ಲ.

ಕಾಗೆಗಳಿಗೆ ಹೆಸರುಂಟು ಮಾರ್ರೆ…: ಜ್ಯುಬಿಲಿ, ಹ್ಯಾರಿಸ್‌, ಗ್ರಿಪ್ಪಿ, ರಾಕಿ, ಎರಿನ್‌, ಪಾಪಿ ಮತ್ತು ಮೆರ್ಲಿನಾ- ಎಂಬ ಹೆಸರಿನ 7 ಕಾಗೆಗಳು ಇವು. ಇವುಗಳಿಗೆ ಪುಟ್ಟ ಮರಿಗಳೂ ಇವೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next