Advertisement

ಕಿರೀಟ ತಂದ ತಲೆನೋವು

10:12 AM Mar 04, 2020 | mahesh |

ಸಿರಾಕ್ಯೂಸ್‌ ದೇಶವನ್ನಾಳುತ್ತಿದ್ದ ಹೆರಾನ್‌ಗೆ ಒಮ್ಮೆ ಚಿನ್ನದ ಕಿರೀಟ ಮಾಡಿಸಿಕೊಳ್ಳುವ ಆಸೆಯಾಯಿತು. ಅದಕ್ಕಾಗಿ ನಿರ್ದಿಷ್ಟ ತೂಕದ ಚಿನ್ನವನ್ನು ಅಕ್ಕಸಾಲಿಗನಿಗೆ ಕೊಟ್ಟ. ಆ ಚಿನ್ನದಲ್ಲಿ ಅತ್ಯಂತ ಸುಂದರವಾದ ಕಿರೀಟ ಸಿದ್ಧಗೊಂಡಿತು. ಅದನ್ನು ನೋಡಿದಾಗ ಖುಷಿಯಾದರೂ “ಇದರಲ್ಲಿ ಕೀಳುಲೋಹಗಳು ಬೆರೆತಿರಬಹುದೆ?’ ಎಂಬ ಸಂಶಯದ ಹುಳು ಹೆರಾನ್‌ ತಲೆಯನ್ನು ಹೊಕ್ಕಿತು. ಹಾಗೆಂದು ಮತ್ತೆ ಕಿರೀಟವನ್ನು ಕರಗಿಸಿ ಪರೀಕ್ಷಿಸುವುದಕ್ಕೆ ಮನಸ್ಸು ಒಪ್ಪಲಿಲ್ಲ. ಅದನ್ನು ಕರಗಿಸದೆ, ಚಿನ್ನದಲ್ಲಿ ಬೆರೆಕೆಯಾಗಿದೆಯೇ ಎಂದು ಪರೀಕ್ಷಿಸಲು ಅವನು ತನ್ನ ಆಸ್ಥಾನ ವಿದ್ವಾಂಸನಾಗಿದ್ದ ಆರ್ಕಿಮಿಡೀಸ್‌ನನ್ನು ಕೇಳಿಕೊಂಡ. ಆರ್ಕಿಮಿಡೀಸ್‌ಗೂ ತಕ್ಷಣಕ್ಕೆ ಅದಕ್ಕೇನು ಪರಿಹಾರ ಎಂದು ಹೊಳೆಯಲಿಲ್ಲ. ಕರಗಿಸದೆ ಚನ್ನದ ಶುದ್ಧತೆ ಪರೀಕ್ಷಿಸುವುದು ಹೇಗೆ ಎಂಬ ಪ್ರಶ್ನೆಯೇ ದಿನರಾತ್ರಿ ಅವನ ತಲೆಯನ್ನು ಕೊರೆಯತೊಡಗಿತು. ಅದೇ ಚಿಂತೆಯಲ್ಲಿ ಅವನು ಸಾರ್ವಜನಿಕ ಸ್ನಾನ ಗೃಹಕ್ಕೆ ಹೋದ. ಅಲ್ಲಿ ತುಂಬಿದ್ದ ಸ್ನಾನದ ತೊಟ್ಟಿಯಲ್ಲಿ ಮುಳುಗಿದ. ಆಗ, ಸ್ವಲ್ಪ ನೀರು ಹೊರಗೆ ಚೆಲ್ಲಿತು. ಇದುವರೆಗೂ ಯೋಚಿಸುತ್ತಿದ್ದ ಸಮಸ್ಯೆಗೆ ಪರಿಹಾರ ತಕ್ಷಣ ಹೊಳೆಯಿತು. ಆ ಆನಂದಾತಿರೇಕದಲ್ಲಿ ತನ್ನ ಮೈ ಮೇಲೆ ಬಟ್ಟೆ ಇಲ್ಲ ಎನ್ನುವುದನ್ನೂ ಲೆಕ್ಕಿಸದೆ. “ಯುರೇಕಾ ಯುರೇಕಾ’ ಎಂದು ಆರ್ಕಿಮಿಡೀಸ್‌ ಓಡುತ್ತಾಹೋದ. ಗ್ರೀಕ್‌ ಭಾಷೆಯಲ್ಲಿ ಹಾಗೆಂದರೆ ಕಂಡು ಹಿಡಿದಿದೆ ಎಂದರ್ಥ.

Advertisement

ಆರ್ಕಿಮಿಡೀಸ್‌ ಕಂಡು ಹಿಡಿದ್ದಾದರೂ ಏನು? ಪ್ರತಿಯೊಂದು ವಸ್ತುವೂ ನೀರಲ್ಲಿ ಮುಳುಗಿದಾಗ ತನ್ನ ಗಾತ್ರದಷ್ಟೇ ನೀರನ್ನು ಹೊರಚೆಲ್ಲುತ್ತದೆ. ಚಿನ್ನ ಸಾಂದ್ರ ಲೋಹವಾದ್ದರಿಂದ, ಅದರ ಗಾತ್ರ ಕಮ್ಮಿಯಾದರೂ ತೂಕ ಹೆಚ್ಚು. ಬೆಳ್ಳಿ, ಹಿತ್ತಾಳೆಯಂತಹ ಇತರ ಲೋಹ ಅಥವಾ ಲೋಹಸಂಯುಕ್ತಗಳಲ್ಲಿ ಸಾಂದ್ರತೆ ಕಮ್ಮಿಯಿರುವುದರಿಂದ, ಅವುಗಳ ಗಾತ್ರ ಹೆಚ್ಚು. ಹಾಗಾಗಿ, ಅವುಗಳು ಮುಳುಗಿದಾಗ ಪಲ್ಲಟಿಸುವನೀರಿನ ಪರಿಮಾಣವೂ ಹೆಚ್ಚೇ. ತುಂಬ ಸರಳವಾಗಿ ಹೇಳಬೇಕೆಂದರೆ, ಒಂದು ಕೆಜಿ ಚಿನ್ನ ಪಲ್ಲಟಿಸುವ ನೀರಿನ ತೂಕಕ್ಕಿಂತ, ಒಂದು ಕೆಜಿ ಮಿಶ್ರಲೋಹ ಪಲ್ಲಟಿಸುವ ನೀರಿನ ತೂಕ ಹೆಚ್ಚಿರುತ್ತದೆ. ಆರ್ಕಿಮಿಡೀಸ್‌ ಮನೆ ಸೇರಿದ ಮೇಲೆ, ಪ್ರಯೋಗ ಮಾಡಿ ನೋಡಿದಾಗ, ಕಿರೀಟವು ರಾಜ ಕೊಟ್ಟ ಚಿನ್ನ ಪಲ್ಲಟಿಸಿದ ನೀರಿಗಿಂತ ಹೆಚ್ಚಿನ ನೀರನ್ನು ಪಲ್ಲಟಿಸಿತು. ಅದರರ್ಥ ಕಿರೀಟದಲ್ಲಿ ಚಿನ್ನದ ಜೊತೆ ಬೇರೆ ಲೋಹಗಳನ್ನು ಬೆರಕೆ ಮಾಡಲಾಗಿದೆ ಎಂದೇ ಅಲ್ಲವೇ?

ಅಕ್ಕಸಾಲಿಗನಿಗೆ ಶಿಕ್ಷೆ ಆಯಿತು. ಆರ್ಕಿಮಿಡೀಸನ ಕೀರ್ತಿ, ನಗ್ನವಾಗಿ ಓಡಿದ ಅಪಕೀರ್ತಿಯ ಜೊತೆ ನೂರ್ಮಡಿ ಹೆಚ್ಚಾಯಿತು!

Advertisement

Udayavani is now on Telegram. Click here to join our channel and stay updated with the latest news.

Next