Advertisement

ಉಪಕಾರಾಗೃಹ ಆವರಣದಲ್ಲೇ ಗುಂಪುಗಳ ಹೊಡೆದಾಟ

09:40 AM Jun 20, 2019 | Suhan S |

ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹ ಆವರಣದಲ್ಲಿಯೇ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಈ ವೇಳೆ ಓರ್ವನಿಗೆ ಗಂಭೀರ ಗಾಯಗಳಾಗಿವೆ.

Advertisement

ಇಲ್ಲಿನ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳಾದ ನೇಕಾರ ನಗರದ ಸೂರಿ, ಗಿರಿ ಅವರನ್ನು ನ್ಯಾಯಾಲಯದಿಂದ ಕರೆದುಕೊಂಡು ಬರುತ್ತಿದ್ದಾಗ, ಇವರನ್ನು ಭೇಟಿಯಾಗಲು ಸುಮಾರು 10ಕ್ಕೂ ಅಧಿಕ ಜನರು ಬುಧವಾರ ಬಂದಿದ್ದರು. ಇದನ್ನು ತಿಳಿದ ಶ್ಯಾಮ ಜಾಧವ ಮತ್ತು ರವಿ ಜಾಧವ ಗುಂಪಿನ 20-25 ಜನರ ತಂಡದವರು ಸ್ಥಳಕ್ಕೆ ಆಗಮಿಸಿ, ಏಕಾಏಕಿ ರವಿ ಮಹಾಂತಶೆಟ್ಟರ ಮತ್ತು ಜುನೈದ್‌ ಮುಲ್ಲಾ ಸೇರಿ ಇನ್ನಿತರರ ಮೇಲೆ ಲಾಂಗ್‌, ಮಚ್ಚು, ತಲ್ವಾರ್‌ನಿಂದ ಉಪ ಕಾರಾಗೃಹ ಆವರಣದಲ್ಲಿಯೇ ಹಲ್ಲೆ ಮಾಡಿದ್ದಾರೆ. ಈ ವೇಳೆ ಪರಸ್ಪರರು ಹೊಡೆದಾಡಿಕೊಂಡಿದ್ದಾರೆ. ಸೂರಿ ಸ್ನೇಹಿತರು ಆವರಣದಲ್ಲಿ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಲಾಗಿದೆ.

ಚಂದ್ರು ಗಡಗಿ, ಗಣೇಶ ಜಾಧವ ಸೇರಿ 25 ಜನರ ತಂಡ ದಾಳಿ ಮಾಡಿದೆ ಎನ್ನಲಾಗಿದ್ದು, ಘಟನೆಯಲ್ಲಿ ಗಾಯಗೊಂಡ ಜುನೈದ್‌, ರವಿಯನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ಯಾಮ್‌ ಜಾಧವ ಮತ್ತು ರವಿ ಜಾಧವ ಗುಂಪಿನವರೆ ಹಲ್ಲೆ ಮಾಡಿದ್ದಾರೆಂದು ಗಾಯಾಳು ರವಿ ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸುವುದರೊಳಗೆ ಹಲ್ಲೆಕೋರರು ಪರಾರಿಯಾಗಿದ್ದಾರೆ.

ಡಿಸಿಪಿ ನಾಗೇಶ ಡಿ.ಎಲ್., ಎಸಿಪಿ ಎಚ್.ಕೆ. ಪಠಾಣ, ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್‌ ಜಗದೀಶ ಹಂಚನಾಳ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಲ್ಲೆಕೋರರ ಮೇಲೆ ಅಶೋಕನಗರ ಠಾಣೆಯಲ್ಲಿ ದೊಂಬಿ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ.

ಮಾರಕಾಸ್ತ್ರಗಳಿಂದ ಹೊಡೆದಾಟ:

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಜೂ.7ರಂದು ನೇಕಾರನಗರ ಈಶ್ವರನಗರದಲ್ಲಿ ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದವು. ಈ ಸಂದರ್ಭದಲ್ಲಿ ಹುಸೇನಸಾಬ ಬಿಜಾಪುರಿ ಎಂಬಾತನಿಗೆ ಚಾಕುವಿನಿಂದ ಇರಿದಿದ್ದರಿಂದ ತೀವ್ರ ಗಾಯಗೊಂಡಿದ್ದ. ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ಘಟನೆಗೆ ಸಂಬಂಧಿಸಿ ಕಸಬಾಪೇಟೆ ಪೊಲೀಸರು ಸೂರಿ, ಗಿರಿ, ಮಹ್ಮದ ಸಾದಿಕ್‌, ವಿನಾಯಕ ಎಂಬುವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
Advertisement

ಗೋಮಾಂಸ ಸಾಗಾಟ ಅನುಮಾನ: ದಾಳಿ ವೇಳೆ ದನದ ಮೂಳೆ ಪತ್ತೆ

ಧಾರವಾಡ: ಅಕ್ರಮವಾಗಿ ಗೋಮಾಂಸ ಸಾಗಾಟದ ಅನುಮಾನದಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ತಡೆ ಹಿಡಿದ ಲಾರಿಯಲ್ಲಿ ಬರೀ ಮೂಳೆ ಸಿಕ್ಕ ಘಟನೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜು ಬಳಿ ಬುಧವಾರ ನಡೆದಿದೆ. ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಲಾರಿಯನ್ನು ತಡೆಯುತ್ತಿದ್ದಂತೆ ಲಾರಿ ಮಾಲೀಕ ಪರಾರಿಯಾಗಿದ್ದಾನೆ. ನಂತರ ಲಾರಿ ಚಾಲಕ ಹಾಗೂ ಕ್ಲೀನರ್‌ನನ್ನು ಕಾರ್ಯಕರ್ತರು ವಶಕ್ಕೆ ಪಡೆದು ವಿದ್ಯಾಗಿರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ವಿದ್ಯಾಗಿರಿ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಬಳಿಕ ಠಾಣೆಗೆ ಕರೆದುಕೊಂಡು ಬಂದು ಘಟನೆ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆಗ ಅವರಿಂದ ಲಾರಿಗೆ ಸಂಬಂಧಿಸಿದ ಹಾಗೂ ಮೂಳೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಬಿಟ್ಟು ಕಳುಹಿಸಿದ್ದಾರೆ. ಲಾರಿಯಲ್ಲಿ ಯಾವುದೇ ಮಾಂಸ ಸಾಗಾಟ ಮಾಡುತ್ತಿರಲಿಲ್ಲ. ಮೂಳೆಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಅವರ ಮೂಳೆ ಸಾಗಾಟಕ್ಕೆ ಸಂಬಂಧಿಸಿದ ಲೈಸನ್ಸ್‌ ಇದ್ದ ಹಿನ್ನೆಲೆ ವಿಚಾರಣೆ ಮಾಡಿ ಕಳುಹಿಸಲಾಗಿದೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವಿದ್ಯಾಗಿರಿ ಠಾಣೆ ಇನ್ಸ್‌ಪೆಕ್ಟರ್‌ ಅಲ್ತಾಪ್‌ ಹುಸೇನ್‌ ಮುಲ್ಲಾ ಸ್ಪಷ್ಟಪಡಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next