ತಿರುವನಂತಪುರ: ಕೇರಳದ ಅಳತ್ತೂರು ಕ್ಷೇತ್ರದ ಕಾಂಗ್ರೆಸ್ ಸಂಸದೆ ರಮ್ಯಾ ಹರಿದಾಸ್‌ಗೆ ಕಾರು ಖರೀದಿಸಬೇಕಾಗಿದೆ. ಅದಕ್ಕಾಗಿ ಜನರಿಂದಲೇ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಖರೀದಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ. ರಮ್ಯಾ ಅವರು 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ‘ನಮ್ಮ ಸಂಸದೆಗೆ ಕಾರು ಖರೀದಿಸುವ ನಿಟ್ಟಿನಲ್ಲಿ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದ್ದೇವೆ. ಅದಕ್ಕಾಗಿ ಆಸಕ್ತಿ ಇದ್ದವರು ದೇಣಿಗೆ ನೀಡಬಹುದು’ ಎಂದು ಅಳತ್ತೂರು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಪಾಳಯಂ ಪ್ರದೀಪ್ ಶನಿವಾರ ತಿಳಿಸಿದ್ದಾರೆ. ಕೇರಳದ ವಿಧಾನಸಭೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆ.9ರಂದು ಕಾರ್ ಕೀಲಿ ಕೈ ಹಸ್ತಾಂತರಿಸಲಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದೆ ರಮ್ಯಾ ‘ಸಂತೋಷವಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಅಹರ್ನಿಶಿ ದುಡಿದಿದ್ದಾರೆ’ ಎಂದಿದ್ದಾರೆ.