ಕೊಪ್ಪಳ: ಕೋವಿಡ್ 19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದು, ಗ್ರೀನ್ ಜೋನ್ ವ್ಯಾಪ್ತಿಯ ಕೆಲವು ಜಿಲ್ಲೆಗಳಲ್ಲಿ ಕಾರ್ಯ ಚಟುವಟಿಕೆ ಆರಂಭಕ್ಕೆ ಸರ್ಕಾರ ವಿನಾಯಿತಿ ನೀಡಿದೆ. ಈ ಬೆನ್ನಲ್ಲೆ ಜಿಲ್ಲಾಡಳಿತ ಜಿಲ್ಲೆಯ ಸಣ್ಣ-ಮಧ್ಯಮ ಉದ್ಯಮ, ಸಿವಿಲ್ ಕಾಮಗಾರಿ, ನರೇಗಾ ಸೇರಿದಂತೆ ಜನರು ಗುಂಪು ಸೇರುವ ಕೆಲ ಸ್ಥಳ, ಚಟುವಟಿಕೆಗಳನ್ನು ಹೊರತುಪಡಿಸಿ ಅಂಗಡಿ-ಮುಂಗಟ್ಟು ತೆರೆಯಲು ನಿರ್ಬಂಧದಲ್ಲೇ ಅನುಮತಿ ನೀಡಿದೆ. ಹೀಗಾಗಿ ಜಿಲ್ಲೆ ತಿಂಗಳ ಬಳಿಕ ನಿಧಾನಗತಿಯಲ್ಲಿ ಕಾರ್ಯಚಟುವಟಿಕೆ ಆರಂಭಿಸುತ್ತಿದೆ.
ಹೌದು. ಕೋವಿಡ್ 19 ಮಹಾಮಾರಿ ನಿಯಂತ್ರಣಕ್ಕೆ ಸಾಮಾಜಿಕ ಅಂತರವೊಂದೇ ಮದ್ದು ಎನ್ನುವುದನ್ನು ಅರಿತು ಸರ್ಕಾರ ಇಡೀ ದೇಶದಲ್ಲಿ 40 ದಿನಗಳ ಕಾಲ ಲಾಕ್‌ಡೌನ್ ಜಾರಿ ಮಾಡಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆ ಇನ್ನೂ ಗ್ರೀನ್ (ಹಸಿರು ಪಟ್ಟಿ) ಝೋನ್‌ನಲ್ಲಿರುವುದು ಸಮಾಧಾನದ ವಿಷಯ.
ಕಾಮಗಾರಿ ಆರಂಭ: ಕೋವಿಡ್ 19 ದಿಂದಾಗಿ ಜಿಲ್ಲೆಯ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಬಂದ್ ಮಾಡಲಾಗಿತ್ತು. ಆದರೆ ಈಗ ಸಣ್ಣ ಹಾಗೂ ಮಧ್ಯಮ ಉದ್ಯಮಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಕಾರ್ಯಾರಂಭಗೊಂಡಿವೆ. ಇನ್ನೂ ಜಿಲ್ಲೆಯ ಗ್ರಾಮೀಣದಲ್ಲಿ ಸಿವಿಲ್ ಕಾಮಗಾರಿಗಳ ಕಾರ್ಯವೂ ನಿಧಾನವಾಗಿ ಆರಂಭವಾಗಿವೆ. ಸಾಧ್ಯವಾದಷ್ಟು ಗುಂಪು ಸೇರುವಿಕೆ ತಡೆಯಲು ಸೂಚಿಸಿದೆ.
ಆಭರಣ, ಬಟ್ಟೆ ಅಂಗಡಿ ಆರಂಭ: ಜಿಲ್ಲಾಡಳಿತವು ಜಿಲ್ಲೆಯಲ್ಲಿನ 19 ಜನ ಸೇರುವಂತಹ ಅಂಗಡಿ-ಮುಂಗಟ್ಟು ಹೊರತುಪಡಿಸಿ ಉಳಿದಂತೆ ನಗರ ಪ್ರದೇಶದಲ್ಲಿ ಚಿನ್ನಾಭರಣ ಮಳಿಗೆಗಳು, ಬಟ್ಟೆ, ಸ್ಟೇಷನರಿ, ಎಲೆಕ್ಟ್ರಿಕ್, ಹಾರ್ಡ್‌ವ್ಹೆರ್, ಸಿಮೆಂಟ್ ಅಂಗಡಿಗಳು, ಮೊಬೈಲ್ ಮಾರಾಟ ಮಳಿಗೆಗಳು ಅನುಮತಿ ಪಡೆದು ವಹಿವಾಟು ಆರಂಭಿಸಿವೆ. ಈ ಎಲ್ಲ ಅಂಗಡಿಗಳಿಗೂ ಜಿಲ್ಲಾಡಳಿತ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸರ್ ಬಳಕೆ ಮಾಡುವುಂತ ನಿರ್ಬಂಧ ಹಾಕಿದೆ.
ತರಕಾರಿ ಮನೆ ಮನೆಗೆ: ಜನದಟ್ಟಣೆ ಸೇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತರಕಾರಿ ಮಾರುಕಟ್ಟೆ ಆರಂಭಿಸಿಲ್ಲ. ಜಿಲ್ಲಾಡಳಿತ ಮೊದಲಿನಂತೆ ಸರ್ಕಾರಿ ಹಾಗೂ ಖಾಸಗಿ, ರೈತರ ವಾಹನಗಳಲ್ಲಿ ನಗರ, ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತರಕಾರಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಎಪಿಎಂಸಿಯಲ್ಲಿ ಖರೀದಿ ಕೇಂದ್ರವು ನಡೆಯುತ್ತಿದೆ.
ಕೃಷಿ ಕಾರ್ಯ ನಿರಾತಂಕ: ಇನ್ನೂ ಜಿಲ್ಲೆಯಲ್ಲಿ ಕೋವಿಡ್ 19 ಲಾಕ್‌ಡೌನ್ ಆದ ಕೆಲವೇ ದಿನಗಳ ಬಳಿಕ ರೈತರ ಸಮಸ್ಯೆಯನ್ನು ಅರಿತು ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಕೆಲವೊಂದು ನಿರ್ಬಂಧ ವಿಧಿಸಿ ಕಾರ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಮೆಕ್ಯಾನಿಕ್ ಅಂಗಡಿಗಳು ಕಾರ್ಯಾರಂಭಗೊಂಡಿವೆ. ಆದರೆ ಕೃಷಿ ಉತ್ಪನ್ನ ಮಾರಾಟವಾಗದೇ ಅನ್ನದಾತ ತೊಂದರೆ ಅನುಭವಿಸುತ್ತಿದ್ದಾನೆ. ನಿರ್ಬಂಧವಿದ್ದರೂ ಸುತ್ತಾಟ: ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ವಾಹನಗಳು ಹಾಗೂ ಆರೋಗ್ಯಕ್ಕೆ ಸಂಬಂಧಿತ ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿಯಿದ್ದರೂ ಜಿಲ್ಲೆಯಲ್ಲಿ ಬೈಕ್ ಸೇರಿದಂತೆ ಕೆಲ ಗೂಡ್ಸ್ ವಾಹನಗಳು ಸಂಚರಿಸುತ್ತಿವೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಅಂಗಡಿಗಳ ಆರಂಭಕ್ಕೆ ವಿನಾಯಿತಿ ನೀಡಿದ್ದು, ನಿರ್ಬಂಧವನ್ನೂ ವಿಧಿಸಿದೆ. ಕಾಮಗಾರಿ ಆರಂಭಕ್ಕೂ ಒಪ್ಪಿಗೆ ಸೂಚಿಸಿದೆ. ಈ ಮಧ್ಯೆಯೂ ಲಾಕ್‌ಡೌನ್ ಮುಂದುವರಿದಿದ್ದು, ಜಿಲ್ಲೆಯ ಜನತೆ ಮನೆ ಬಿಟ್ಟು ಹೊರಗೆ ಬರುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದೆ.
–ದತ್ತು ಕಮ್ಮಾರ