Advertisement

ಕೆರೆಗೆ ಅಡ್ಡ ಬೋರು: ಉಕ್ಕಿತು ನೀರು!

12:25 AM Apr 14, 2019 | mahesh |

ಆಲಂಕಾರು: ಬೇಸಗೆಯಲ್ಲಿ ನೀರಿನ ಸಮಸ್ಯೆಯಿಂದ ಪಾರಾಗಲು ಬತ್ತಿ ಹೋದ ಕೆರೆಗೆ ಅಡ್ಡ ಬೋರು ಹೊಡೆಸಿ, ಯಥೇತ್ಛ ನೀರು ಲಭ್ಯವಾದ ಘಟನೆ ಆಲಂಕಾರು ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕು ಆಲಂಕಾರು ಗ್ರಾಮದ ಕಯ್ಯಪ್ಪೆ ಜನಾರ್ದನ ಗೌಡ ಅವರು ತಮ್ಮ ಕೆರೆಗೆ ಅಡ್ಡ ಬೋರು ಹೊಡೆದಿದ್ದು, ಈಗ ಅಡಿಕೆ ತೋಟಕ್ಕೆ ಭರಪೂರ ನೀರುಣಿಸುತ್ತಿದ್ದಾರೆ.

Advertisement

ಮೂರೂ ಕೊಳವೆಬಾವಿ ಹಾಳು
ಅವರು ನಾಲ್ಕು ವರ್ಷದ ಹಿಂದೆ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರು. ಆದರೆ, ಹನಿ ನೀರು ಪಡೆಯಲೂ ಸಾಧ್ಯವಾಗಲಿಲ್ಲ. ಆಗ ತಮ್ಮ ಜಾಗದಲ್ಲಿದ್ದ ಹಳೆಯ ಕೆರೆಯ ನೆನಪು ಅವರಿಗಾಯಿತು. ಕೇವಲ 10 ಆಡಿ ಆಳವಿದ್ದ ಕೆರೆಯನ್ನು ದುರಸ್ತಿ ಮಾಡುವ ಸಾಹಸಕ್ಕಿಳಿದರು. ಕೆರೆಯಲ್ಲಿ ನೀರಿನ ತೇವಾಂಶ ಸಿಕ್ಕಿತೇ ಹೊರತು ನೀರು ಸಿಗಲಿಲ್ಲ.

ಹಲವು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಓದಿದ್ದು ನೆನಪಾಗಿ ಅಡ್ಡಬೋರು ಮಹಮ್ಮದ್‌ ಅವರನ್ನು ಕರೆಸಿದರು. ಮೂರು ವರ್ಷಗಳ ಹಿಂದೆ ತಮ್ಮ ಕಿರಿದಾದ ಕೆರೆಗೆ ಅಡ್ಡಬೋರು ಅಳವಡಿಸಿದ ಜನಾರ್ದನ ಗೌಡರು ಎರಡು ಇಂಚು ನೀರು ಪಡೆದರು. ಈ ವರ್ಷ ಕೊಳವೆಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು ಗಮನಕ್ಕೆ ಬಂತು. ಈ ವರ್ಷ ಮತ್ತೂಂದು ಅಡ್ಡ ಬೋರು ಅಳವಡಿಸಿದ್ದು, ಸಾಕಷ್ಟು ಪ್ರಮಾಣದ ನೀರು ಕೆರೆಯಲ್ಲಿ ಸಂಗ್ರಹವಾಗುತ್ತಿದೆ.

4ರಿಂದ 12 ಅಡಿಗೆ ಹೆಚ್ಚಳ
ಕೆಲ ದಿನಗಳ ಹಿಂದೆ ಒಮ್ಮೆ ಖಾಲಿ ಮಾಡಿದ ಕೆರೆಯಲ್ಲಿ ನಾಲ್ಕು ಅಡಿ ನೀರು ಮಾತ್ರ ಸಂಗ್ರಹವಾಗುತ್ತಿತ್ತು. ತೋಟಕ್ಕೆ ನೀರುಣಿಸಲು ಕಷ್ಟವಾಗುತ್ತಿತ್ತು. ಈ ವರ್ಷ ಮತ್ತೆ 55 ಅಡಿ ಉದ್ದದ ಒಂದು ಅಡ್ಡ ಬೋರನ್ನು ಅಳವಡಿಸಿದ ಪರಿಣಾಮ ಕೆರೆಯಲ್ಲಿ ಇದೀಗ 12 ಅಡಿಗಳಷ್ಟು ನೀರು ಸಂಗ್ರಹವಾಗಿದೆ. 5ಹೆಚ್‌ಪಿ ಪಂಪ್‌ನಲ್ಲಿ 4 ಗಂಟೆ ಕಾಲ ತೋಟಕ್ಕೆ ಸಿಂಪಡಿಸುವಷ್ಟು ನೀರು ಸಂಗ್ರಹವಾಗುತ್ತಿದೆ.

ಏನಿದು ಅಡ್ಡ ಬೋರು?
ಆಳವಾದ ಕೆರೆ ಅಥವಾ ಬಾವಿಯ ಗೋಡೆಯನ್ನು ಕೇವಲ 3 ಇಂಚು ವ್ಯಾಸದ ಕಬ್ಬಿಣದ ಪೈಪ್‌ ಮೂಲಕ ಕೊರೆದು ನೀರಿನ ಮೂಲವನ್ನು ಹುಡುಕುವುದೇ ಅಡ್ಡಬೋರು. ನೀರು ಸಿಕ್ಕಿದ ಬಳಿಕ 2 ಇಂಚು ಅಳತೆಯ ಪಿವಿಸಿ ಪೈಪನ್ನು ಅಲ್ಲಲ್ಲಿ ತೂತು ಮಾಡಿ ಕೇಸಿಂಗ್‌ ಪೈಪ್‌ ಮಾದರಿ ಕೊರೆದ ಕೊಳವೆಗೆ ಅದನ್ನು ಅಳವಡಿಸಲಾಗುತ್ತದೆ.

Advertisement

ಹೀಗೆ ಅಳವಡಿಸಿದ ಬಳಿಕ ಕೊಳವೆಯಲ್ಲಿ ಸಂಗ್ರಹವಾದ ನೀರು ಕೆರೆಗೆ ಹರಿಯುತ್ತದೆ. ಈ ಕಾಮಗಾರಿಗೆ ಕನಿಷ್ಠ 6 ಕಾರ್ಮಿಕರ ಅಗತ್ಯವಿದೆ. ಇದು ಕೇರಳ ರಾಜ್ಯದಲ್ಲಿ ಜನಪ್ರಿಯವಾಗಿದೆ. ಆದರೆ ಫಾಸ್ಟ್‌ ರಿಗ್‌, ಗ್ಯಾಸ್‌ ಬೋರ್‌ವೆಲ್‌ಗ‌ಳು ಬಂದ ಬಳಿಕ ಇದರ ಬೇಡಿಕೆ ಬಹಳಷ್ಟು ಕಡಿಮೆಯಾಗಿದೆ. ಇದೀಗ ಅಡ್ಡ ಬೋರು ಯಾಂತ್ರೀಕೃತವಾಗಿರುವುದರಿಂದ ಮತ್ತೆ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಅಡ್ಡ ಬೋರ್‌ ಅನ್ನು ಕೆರೆ, ಬಾವಿಗಳ ನೀರಿನ ಮೂಲ ಹುಡುಕುವ ಬದಲು ದೊಡ್ಡ ಪರ್ವತಗಳಿಗೆ ಪೈಪ್‌ ಲೈನ್‌ ಕೇಬಲ್‌ ಅಳವಡಿಕೆಗೆ ಹೆಚ್ಚು ಉಪಯೋಗಿಸಲಾಗುತ್ತಿದೆ.

ಕಡಿಮೆ ವೆಚ್ಚದಲ್ಲಿ ನೀರು
ಅಡ್ಡ ಬೋರಿನಿಂದ 15ರಿಂದ 20 ಸಾವಿರ ರೂ. ವೆಚ್ಚದಲ್ಲಿ ಇಂಗಿ ಹೋದ ಕೆರೆ, ಬಾವಿಯಲ್ಲಿ ನೀರು ಪಡೆಯಬಹುದು. ಕರ್ನಾಟಕದಲ್ಲಿ ಅಡ್ಡ ಬೋರು ಕೊರೆಯುವ ಕಾರ್ಮಿಕರಿಲ್ಲದ ಕಾರಣ ಕೇರಳದ ಮಹಮ್ಮದ್‌ ಅವರ ತಂಡ ಮಾತ್ರ ಈ ಕಾಮಗಾರಿಯನ್ನು ಮಾಡುತ್ತಿದೆ. ದಿನಕ್ಕೆ 55 ಅಡಿ ಕೊರೆಯುತ್ತಾರೆ. ಒಂದು ಅಡಿ ಕೊರೆಯಲು 200 ರೂ. ದರ ವಿಧಿಸುತ್ತಾರೆ.

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next