Advertisement

ಅಧಿಕಾರಿಗಳಿಂದಲೇ ಸಾವಿರಾರು ಕೋಟಿ ನಷ್ಟ!

09:36 AM Aug 12, 2020 | Suhan S |

ಬೆಂಗಳೂರು: ಟೋಟಲ್‌ ಸ್ಟೇಷನ್‌ ಸರ್ವೇ ವರದಿಯಲ್ಲಿರುವುದಕ್ಕಿಂತ ದುಪ್ಪಟ್ಟು ನಷ್ಟ ಪಾಲಿಕೆ ಅಧಿಕಾರಿಗಳಿಂದಲೇ ಆಗಿರುವ ಸಾಧ್ಯತೆ ಹೆಚ್ಚಾಗಿದೆ. ಪಾಲಿಕೆಯ ಆದಾಯ ಮೂಲ ಯಾವ ರೀತಿ ಪೋಲಾಗುತ್ತಿದೆ ಹಾಗೂ ಅದರಲ್ಲಿ ಅಧಿಕಾರಿಗಳ ಪಾತ್ರ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಟೋಟಲ್‌ ಸ್ಟೇಷನ್‌ ವರದಿಯ ಬಗ್ಗೆ ಮಂಡನೆಯಾಗಿರುವ ಶ್ವೇತ ಪತ್ರದ ವಿವರ ಒಂದು ಉದಾಹರಣೆ. ಅದರಲ್ಲಿನ ಕೆಲವು  ಸ್ಯಾಂಪಲ್‌ಗ‌ಳು ಹೀಗಿವೆ.

Advertisement

ಪೂರ್ವ ವಲಯದ ಹೋಟೆಲ್‌ವೊಂದರ ಸ್ವತಃ ಮಾಲೀಕರು ತಮ್ಮದು “ತಾರಾ ಹೋಟೆಲ್‌’ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಪೂರ್ವ ವಲಯದ ಅಂದಿನ ಜಂಟಿ ಆಯುಕ್ತರು ಇದನ್ನು ಹೋಟೆಲ್‌ ಆ್ಯಂಡ್‌ ರೆಸ್ಟೋರೆಂಟ್‌ ಎಂದು ಪರಿಗಣಿಸಿದ್ದಾರೆ. ಇದರಿಂದಾಗಿ ಪಾಲಿಕೆಗೆ 21.46 ಕೋಟಿ ರೂ. ನಷ್ಟವಾಗಿರುವುದು ವರದಿಯಾಗಿದೆ. ಅದೇ ರೀತಿ, ಆಸ್ತಿ ತೆರಿಗೆ ಪರಿಶೀಲಿಸುವ ಸಂದರ್ಭದಲ್ಲಿ ವಿವಿಧ ಮಾದರಿಯನ್ನು (ಶ್ರೇಣಿ ಆಸ್ತಿಯನ್ನು) ಒಂದೇ ಮಾದರಿಯಲ್ಲಿ ಪರಿಗಣಿಸಿರುವುದರಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವುಂಟಾಗಿದೆ. ಮುಖ್ಯವಾಗಿ 2008-2009ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡದೆ, 2015 -16ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಪರಿಷ್ಕರಿಸಿ, ಆದೇಶ ಮಾಡಿರುವುದೂ ವರದಿಯಾಗಿದೆ.

ಮಹದೇವಪುರ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರದೆ ಮೋಸ ಮಾಡಿರುವುದೂ ವರದಿಯಾಗಿದೆ. ಮೇಲ್ಮನವಿ ವಿಚಾರಣೆ ವೇಳೆ ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಆಸ್ತಿ ತೆರಿಗೆದಾರರ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಕಟ್ಟಡ ನಿರ್ಮಾಣ ಮಾಡಿರುವ ವರ್ಷ ಪರಿಗಣಿಸಿರುವುದು ಹಾಗೂ ಶೇ. 3ರಷ್ಟು ಕಟ್ಟಡ ಸವಕಳಿ ಹೆಚ್ಚಾಗಿ ನೀಡಿರುವುದು ವರದಿಯಾಗಿದೆ. ಹೋಟೆಲ್‌ವೊಂದರ ತನಿಖಾ ವರದಿಯಲ್ಲಿ ಇದು ಬಹಿರಂಗವಾಗಿದೆ. ನಗರದ ಹಲವು ಪ್ರತಿಷ್ಠಿತ ಸಂಸ್ಥೆಗಳು ತಪ್ಪು ವರದಿ ನೀಡಿರುವುದು ಸಹ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಕಂದಾಯ ಅಧಿಕಾರಿಗಳೂ ಶಾಮೀಲು?: ಬಿಬಿಎಂಪಿಯ ಆಸ್ತಿ ಸಂರಕ್ಷಣೆ ಮಾಡಬೇಕಾದ ಕಂದಾಯ ವಿಭಾಗದ ಕೆಲವು ಅಧಿಕಾರಿಗಳೂ ಟೋಟಲ್‌ ಸ್ಟೇಷನ್‌ ಸರ್ವೆ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ವರ್ಗೀಕರಣದಲ್ಲಿಯೂ ಲೋಪ: ಪ್ರತಿಷ್ಠಿತ ಸಂಸ್ಥೆಗಳು ಹಾಗೂ ಹೋಟಲ್‌ಗ‌ಳನ್ನು ಆಸ್ತಿತೆರಿಗೆ ಪಾವತಿಯಿಂದ ತಪ್ಪಿಸುವ ಉದ್ದೇಶದಿಂದ ಪಾಲಿಕೆಯ ಅಧಿಕಾರಿಗಳು ಕೆಲವು ಪ್ರತಿಷ್ಠಿತ ಸಂಸ್ಥೆಗಳ ವಿಸ್ತೀರ್ಣವನ್ನು ತಿರುಚಿರುವುದರ ಜತೆಗೆ “ಇ’ ವಲಯಕ್ಕೆ ಸೇರಿದ ಆಸ್ತಿಯನ್ನು “ಡಿ’ ವಲಯಕ್ಕೆ ಪರಿಗಣಿಸಿ ಲೆಕ್ಕಾಚಾರ ಮಾಡಿ, ಆಸ್ತಿ ತೆರಿಗೆ ಪರಿಷ್ಕರಿಸಿ ತಪ್ಪೆಸಗಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ರೀತಿ ಆಸ್ತಿ ತೆರಿಗೆದಾರರ ಜೊತೆ ಪಾಲಿಕೆಯ ಅಧಿಕಾರಿಗಳೇ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ, ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಯಾವುದೇ ಅಧಿಕಾರಿಗಳ ಮೇಲೆ ಕ್ರಮವಾಗಿಲ್ಲ. ಇನ್ನೂ ಹಲವು ಪ್ರಕರಣಗಳು ಇತ್ಯರ್ಥವಾಗಿಲ್ಲ. ಅಲ್ಲದೆ, ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಐಷಾರಾಮಿ ಹೋಟೆಲ್‌ಗ‌ಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳಿಂದ ನಷ್ಟ ವಸೂಲಿ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

Advertisement

ಮೇಲ್ಮನವಿಯೇ ಆಧಾರ! :  ಟೋಟಲ್‌ ಸ್ಟೇಷನ್‌ ಸರ್ವೆ ಕಾರ್ಯ ಪಾಲಿಕೆ ವತಿಯಿಂದ ನಡೆದ ಸಂದರ್ಭದಲ್ಲಿ ಇದನ್ನು ಪ್ರಶ್ನಿಸಿ ಹಲವು ಆಸ್ತಿದಾರರು ಆಯಾ ವಲಯದ ಜಂಟಿ ಆಯುಕ್ತರ ಬಳಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ರೀತಿ ಸಲ್ಲಿಕೆಯಾದ ಮೇಲ್ಮನವಿಗಳನ್ನೇ ಆಧಾರವಾಗಿ ಬಳಸಿ ಕೊಂಡ ಕೆಲವು ಪಾಲಿಕೆಯ ಅಧಿಕಾರಿಗಳು ವಂಚಿಸಿ ದ್ದಾರೆ ಎನ್ನಲಾಗಿದೆ. ಮೇಲ್ಮನವಿ ಸಲ್ಲಿಕೆಯನ್ನು ಪರಿ ಶೀಲಿಸಿದ ಅಧಿಕಾರಿಗಳು ಇವುಗಳ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ವಿಶೇಷ ಸೂಚನಾ ಪತ್ರ ಜಾರಿ ಮಾಡಿದ್ದು, ಇದರಲ್ಲಿ ನಿರ್ದಿಷ್ಟ ಆಸ್ತಿಯ ಸುತ್ತಳತೆಗಿಂತ ಹಲವು ಪಟ್ಟು ವ್ಯತ್ಯಾಸವಾಗಿರುವುದು ಬಿಬಿಎಂಪಿಯ ವಿಶೇಷ ಸಮಿತಿ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ.

ಅವ್ಯವಹಾರ ಎಸಿಬಿ ತನಿಖೆಗೆ :  ಟೋಟಲ್‌ ಸ್ಟೇಷನ್‌ ಸರ್ವೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಸಿಬಿಗೆ ದೂರು ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದರು. ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ಆಯುಕ್ತರು, ಇದು ಪಾಲಿಕೆಯ ಆಸ್ತಿ ವಿಚಾರವಾಗಿದ್ದು, ಇದರಲ್ಲಿ ಶಾಮೀಲಾದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಾಗಿದೆ. ಹೀಗಾಗಿ, ಟೋಟಲ್‌ ಸ್ಟೇಷನ್‌ ಸರ್ವೆ ಅವ್ಯವಹಾರದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಎಸಿಬಿಗೆ ದೂರು ನೀಡಲಾಗುವುದು. ಟೋಟಲ್‌ ಸ್ಟೇಷನ್‌ ಸರ್ವೆ ಸಂಪೂರ್ಣ ವರದಿಯನ್ನು ನಗರಾಭಿವೃದ್ಧಿ ಇಲಾಖೆಗೂ ನೀಡಲಾಗುವುದು. ಇದರಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಕೋರಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next